ಸುಬ್ರಹ್ಮಣ್ಯ-ಪುತ್ತೂರು ರಸ್ತೆ ಬ್ಲಾಕ್ : ಉಕ್ಕಿ ಹರಿಯುತ್ತಿದೆ ಕುಮಾರಧಾರಾ ನದಿ

kumaradhara River
ಕುಮಾರಧಾರಾ ಪ್ರವಾಹದಿಂದಾಗಿ ದೇವರ ಜಳಕದ ಕಟ್ಟೆ, ಸ್ನಾನಘಟ್ಟ ಸಂಪೂರ್ಣ ಮುಳುಗಡೆಗೊಂಡಿದೆ
Published on

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು ಅಪಾಯ ಮಟ್ಟದಲ್ಲಿದೆ. ಸ್ನಾನಘಟ್ಟ ಕಳೆದ ಐದು ದಿನಗಳಿಂದ ಮುಳುಗಡೆಗೊಂಡ ಸ್ಥಿತಿಯಲ್ಲೇ ಇದೆ. ದೇವರ ಜಳಕದ ಕಟ್ಟೆಯೂ ನೀರಿನಲ್ಲಿ ಮುಳುಗಡೆಯಾಗಿದೆ. ಸ್ನಾನಘಟ್ಟದಿಂದ 100ಮೀ ಗೂ ಅಧಿಕ ದೂರ ನೀರು ವ್ಯಾಪಿಸಿದ್ದು, ಕುಮಾರಧಾರ ದ್ವಾರದ ತನಕ ನೀರು ಆಗಮಿಸುವ ನಿರೀಕ್ಷೆ ಇದೆ. ಕುಮಾರಧಾರಾದ ಲಗೇಜ್ ಕೊಠಡಿ ಜಲಾವೃತವಾಗಿದೆ. ಅಂಗಡಿಗಳ ಒಳಗೂ ನೀರು ನುಗ್ಗಿದೆ.

ದರ್ಪಣತೀರ್ಥ ನದಿಯೂ ತುಂಬಿ ಹರಿಯುತ್ತಿದ್ದು, ಶುಕ್ರವಾರ ಮುಂಜಾನೆ ನೀರು ಹೆದ್ದಾರಿಯನ್ನು ಆವರಿಸಿತ್ತು. ಇದರಿಂದ ಸುಬ್ರಹ್ಮಣ್ಯ-ಪುತ್ತೂರು ರಸ್ತೆ ಬ್ಲಾಕ್ ಆಗಿ ಸಂಚಾರ ಸ್ಥಗಿತಗೊಂಡಿತು. ದರ್ಪಣತೀರ್ಥ ನದಿ ತುಂಬಿ ಹರಿದ ಪರಿಣಾಮ ಕುಕ್ಕೆಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ದರ್ಪಣತೀರ್ಥ ಸೇತುವೆ ಮುಳುಗಡೆಗೊಂಡಿತು. ನದಿ ನೀರು ಅರ್ಧ ಕಿ.ಮೀ ದೂರದ ತನಕ ಹೆದ್ದಾರಿಯನ್ನು ಆಕ್ರಮಿಸಿಕೊಂಡಿದೆ.

ಎನ್‌ಡಿಆರ್‌ಎಫ್ ಆಗಮನ

ಕುಮಾರಧಾರ ಸಹಿತ ಗ್ರಾಮೀಣ ಪರಿಸರದ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಮುಂಜಾಗ್ರತೆಗಾಗಿ ಎನ್‌ಡಿಆರ್‌ಎಫ್ ಪಡೆ ಕುಕ್ಕೆ ಕ್ಷೇತ್ರದಲ್ಲಿ ಬೀಡು ಬಿಟ್ಟಿದೆ. ಸುಳ್ಯ ಹಾಗೂ ಪುತ್ತೂರಿನ ಆಗ್ನಿಶಾಮಕ ದಳವು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net