ಮೈದುಂಬಿ ಹರಿಯುತ್ತಿದ್ದಾಳೆ ಕಪಿಲೆ : ಶಿಶಿಲೇಶ್ವರ ಸನ್ನಿಧಿ ಜಲಾವೃತ ; ದೇವಳದವರೆಗಿನ ವಾಹನ ಸಂಚಾರ ಸ್ಥಗಿತ

kapile
ಶ್ರೀ ಶಿಶಿಲೇಶ್ವರ ದೇವಳದ ಪಕ್ಕದಲ್ಲಿರುವ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಭಾರಿ ಮಳೆಗೆ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದ್ದು ಯಾವುದೇ ರೀತಿ ವಾಹನ ಸಂಚಾರಕ್ಕೆ ಅವಕಾಶವಿಲ್ಲದಂತಾಗಿದೆ
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಗುರುವಾರ ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಕಡಿತಗೊಂಡಿದೆ. ದೇವಳದ ಪಕ್ಕದಲ್ಲಿರುವ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಭಾರಿ ಮಳೆಗೆ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದ್ದು ಯಾವುದೇ ರೀತಿ ವಾಹನ ಸಂಚಾರಕ್ಕೆ ಅವಕಾಶವಿಲ್ಲದಂತಾಗಿದೆ. ಪಕ್ಕದಲ್ಲಿ ತೂಗು ಸೇತುವೆ ಇದ್ದು ನಡೆದುಕೊಂಡು ಹೋಗಲು ಅವಕಾಶವಿದ್ದರೂ ಕೂಡ, ಕಪಿಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ತೂಗು ಸೇತುವೆಯ ಮಟ್ಟಕ್ಕೂ ನೀರು ಉಕ್ಕಿ ಹರಿಯುತ್ತಿದೆ. ದೇವಳದ ಅಂಗಣಕ್ಕೆ ನೀರು ಹರಿದು ಬಂದಿದ್ದು, ನೀರಿನೊಂದಿಗೆ ಹರಿದುಕೊಂಡು ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ದೇವಳದ ಅಂಗಣಕ್ಕೆ ನೀರು ಪ್ರವೇಶಿಸಿದೆ. ದೇವರ ಅಂಗಳಕ್ಕೆ ಬರುವುದು ಸಾಮಾನ್ಯವಾಗಿತ್ತು.

ಶಿಶಿಲದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆ ಇದ್ದರೂ ಕೂಡ, ಘಟ್ಟ ಪ್ರದೇಶದಲ್ಲಿ ಹೆಚ್ಚು ಮಳೆ ಆಗುತ್ತಿರುವ ಕಾರಣ ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದ ದೇವರು ಮನೆ ಸಮೀಪದ ಹುಳ್ಕು ಮಲೆ ಎಂಬಲ್ಲಿಂದ ಕಪಿಲೆ ಹರಿದು ಬರುವ ಕಾರಣ ಶಿಶಿಲ ದಲ್ಲಿ ಕಪಿಲೆಯ ಹರಿವು ಹೆಚ್ಚಾಗಿದೆ. ನೀರಿನೊಂದಿಗೆ ಮರದ ದಿಮ್ಮಿಗಳು, ಕಸ ಕಡ್ಡಿಗಳು ಹೆಚ್ಚಾಗಿ ಹರಿದುಕೊಂಡು ಬರುತ್ತಿರುವ ಕಾರಣ ತೂಗು ಸೇತುವೆ ಹಾಗೂ ಕಿಂಡಿ ಅಣೆಕಟ್ಟಿಗೂ ಅಪಾಯವನ್ನು ತಂದೊಡುವ ಸಾಧ್ಯತೆ ಇದೆ. ಸಂಜೆಯ ನಂತರ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದೆ.ನೀರಿನ ಮಟ್ಟ ಸ್ವಲ್ಪ ಇಳಿಕೆಯಾದರೆ ಪಂಚಾಯಿತಿ ವತಿಯಿಂದ ಮರದ ದಿಮ್ಮಿಗಳನ್ನು ತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಪಂಚಾಯಿತಿ ಅಧ್ಯಕ್ಷ ಸುಧಿನ್ ಶಿಶಿಲ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net