ಉತ್ತರ ಪತ್ರಿಕೆಯಲ್ಲಿ ನೋಟುಗಳನ್ನಿಟ್ಟು ಪಾಸ್​ ಮಾಡುವಂತೆ ಶಿಕ್ಷಕರ ಬಳಿ ಮನವಿ ಮಾಡಿದ ವಿದ್ಯಾರ್ಥಿಗಳು!

Student Answersheet
Published on

ನವದೆಹಲಿ: ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ನೋಟುಗಳನ್ನು ಇಟ್ಟು ಪಾಸ್​ ಮಾಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.

ಐಪಿಎಸ್​ ಅಧಿಕಾರಿ ಅರುಣ್​ ಬೋಥ್ರಾ ಅವರು ತಮ್ಮ ಎಕ್ಷ್​(ಟ್ವಿಟರ್​)ನಲ್ಲಿ ನೋಟುಗಳ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ 100 ಹಾಗೂ 200 ರೂ. ಮುಖಬೆಲೆಯ ಅನೇಕ ನೋಟುಗಳು ಮತ್ತು 500 ರೂ. ಮುಖಬೆಲೆಯ ಒಂದು ನೋಟು ಇದೆ. ಈ ನೋಟುಗಳನ್ನು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಿಂದ ವಶಕ್ಕೆ ಪಡೆಯಲಾಗಿದೆ.

ಫೋಟೋವನ್ನು ಶೇರ್​ ಮಾಡಿಕೊಂಡಿರುವ ಅರುಣ್​ ಬೋಥ್ರಾ, ಈ ಫೋಟೋವನ್ನು ಶಿಕ್ಷಕರೊಬ್ಬರು ಕಳುಹಿಸಿದರು. ಈ ನೋಟುಗಳನ್ನು ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ಇಟ್ಟು ಪಾಸ್​ ಮಾರ್ಕ್ಸ್​ ನೀಡುವಂತೆ ವಿನಂತಿಸಿಕೊಂಡಿದ್ದಾರೆ. ಇದು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಡೀ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದಿದ್ದಾರೆ.

ಇದೀಗ ಬೋಥ್ರಾ ಎಂಬುವರು ಶೇರ್​ ಮಾಡಿಕೊಂಡಿರುವ ಫೋಟೋ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುವಂತೆ ಅವರತಿಗೆ ತಿಳಿಸಬೇಕಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇದು ಶಿಕ್ಷಣ ವ್ಯವಸ್ಥೆಗೆ ನೇರವಾಗಿ ಸಂಬಂಧಿಸಿಲ್ಲ. ಅವರಲ್ಲಿ ಹೆಚ್ಚಿನವರು ಹುಡುಗಿಯರು ಅಥವಾ ದೂರದ ಪ್ರದೇಶಗಳ ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಬಯಸುತ್ತಾರೆ. ವಾಸ್ತವವಾಗಿ ಅವರು ಶಿಕ್ಷಣದ ಮೂಲಕ ಭವಿಷ್ಯವನ್ನು ನೋಡುವುದಿಲ್ಲ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪೇಪರ್ ತಿದ್ದುಪಡಿ ದಿನಗಳಲ್ಲಿ ಇದು ನನಗೆ ಕನಿಷ್ಠ ಮೂರು ಬಾರಿ ಅನುಭವವಾಗಿದೆ. 20 ವರ್ಷಗಳ ಹಿಂದೆ ಸಹೋದ್ಯೋಗಿಗಳಿಗೂ ಇದೇ ಅನುಭವ ಆಗಿದೆ. ಸಾಮಾನ್ಯವಾಗಿ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಗಳ ಬದಲಿಗೆ ದುಃಖದ ಕಥೆಯ ನಿರೂಪಣೆಯೊಂದಿಗೆ ಹಣವನ್ನೂ ಇರಿಸಲಾಗಿರುತ್ತದೆ. ಆದರೆ, ಅಂತಹ ವಿದ್ಯಾರ್ಥಿಗಳು ಸಾಮಾನ್ಯವಾಗಿ ವಿಫಲರಾಗುತ್ತಾರೆ ಎಂದು ಹೇಳಬೇಕಾಗಿಲ್ಲ ಎಂದು ಮತ್ತೊರ್ವ ನೆಟ್ಟಿಗರ ಕಾಮೆಂಟ್​ ಮಾಡಿದ್ದಾರೆ.

ಹೀಗೆ ಸಾಕಷ್ಟು ಮಂದಿ ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಎಲ್ಲವೂ ಅಂಕಗಳೇ ಮೇಲೆ ನಿರ್ಧಾರವಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದ ಬದಲು ಅಂಕ ಗಳಿಕೆಯ ಹಿಂದೆ ಬಿದ್ದಿದ್ದಾರೆ. ಆದರೆ, ಅಂಕ ಗಳಿಕೆಯೇ ಮುಖ್ಯವಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net