ಸೆಪ್ಟೆಂಬರ್ 8 ರಿಂದ 10 ರವರೆಗೆ ದೆಹಲಿ ಶಾಲಾ-ಕಾಲೇಜುಗಳಿಗೆ ರಜೆ; ಬ್ಯಾಂಕುಗಳು, ಮಾರುಕಟ್ಟೆಗಳೂ ಕ್ಲೋಸ್…

school
Published on

ನವದೆಹಲಿ: ಸೆಪ್ಟೆಂಬರ್ 8 ರಿಂದ 10ರವರೆಗೆ ದೇಶದ ರಾಜಧಾನಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಮುಂದಿನ ತಿಂಗಳು ದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯಲಿರುವ ಕಾರಣ ಈ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಈ ಶೃಂಗಸಭೆಯಲ್ಲಿ, ವಿಶ್ವದಾದ್ಯಂತದ ಹಿರಿಯ ನಾಯಕರು ಸೇರಿದಂತೆ ಇತರ ಸೆಲೆಬ್ರಿಟಿಗಳು ದೆಹಲಿಯಲ್ಲಿ ಸೇರುತ್ತಾರೆ.

ಈ ಸಮಯದಲ್ಲಿ ಎಲ್ಲಾ ಮುಖಂಡರು ಹಾಗೂ ಪ್ರತಿನಿಧಿಗಳ ಭದ್ರತೆಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗುವುದು. ಸಂಚಾರ ಮಾರ್ಗವನ್ನೂ ಬದಲಾಯಿಸಲಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಅನುಮತಿ ನೀಡಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಆಯುಕ್ತರ ಶಿಫಾರಸಿನ ಮೇರೆಗೆ ಸಿಎಂ ಕೇಜ್ರಿವಾಲ್ ಈ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಮಾತ್ರವಲ್ಲದೆ ಬ್ಯಾಂಕುಗಳು ಮತ್ತು ಮಾರುಕಟ್ಟೆಗಳನ್ನು ಸಹ ಈ ಸಂದರ್ಭದಲ್ಲಿ ಕ್ಲೋಸ್ ಮಾಡಲಾಗುತ್ತದೆ.

ಪ್ರಗತಿ ಮೈದಾನದಲ್ಲಿ ನಡೆಯಲಿದೆ ಜಿ 20 ಶೃಂಗಸಭೆ

ದೆಹಲಿಯ ಪ್ರಗತಿ ಮೈದಾನದಲ್ಲಿರುವ ಅತ್ಯಾಧುನಿಕ ಕನ್ವೆನ್ಷನ್ ಕಾಂಪ್ಲೆಕ್ಸ್‌ನಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ಈ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಗತ್ತಿನ ಎಲ್ಲ ನಾಯಕರು ಭಾಗವಹಿಸಲಿದ್ದಾರೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷರಿಗೆ ಸಂಬಂಧಿಸಿದಂತೆ ಶ್ವೇತಭವನ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಪ್ರತಿ ವರ್ಷ ನಡೆಯುವ ಶೃಂಗಸಭೆಯ ಸ್ಥಳವು ಬದಲಾಗುತ್ತಲೇ ಇರುತ್ತದೆ. ಈ ಬಾರಿ ಭಾರತವು ಈ ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net