ಹತ್ತು ಕಿ.ಮೀ. ನಡೆದುಕೊಂಡು ಹೋಗಿ ಅಪ್ಪನ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ 11ರ ಬಾಲಕಿ !

MID DAY
Published on

ಭುವನೇಶ್ವರ: ಹನ್ನೊಂದು ವರ್ಷದ ಬಾಲಕಿಯೊಬ್ಬಳು ತನ್ನ ಅಪ್ಪನ ವಿರುದ್ಧವೇ ದೂರು ನೀಡುವುದಕ್ಕಾಗಿ 10 ಕಿ.ಮೀ. ನಡೆದುಕೊಂಡು ಹೋದ ಘಟನೆ ಒಡಿಶಾದ ಕೇಂದ್ರಪಾರಾ ಜಿಲ್ಲೆಯಿಂದ ವರದಿಯಾಗಿದೆ. ಬಾಲಕಿಯ ಹೆಸರು ಸುಶ್ರೀ ಸಂಗೀತಾ ಸೇಥಿ. ಈಕೆ ದುಕುಕು ವಿದ್ಯಾಪೀಠದಲ್ಲಿ ಆರನೇ ತರಗತಿ ವಿದ್ಯಾರ್ಥಿನಿ. ಈಕೆಯ ತಂದೆಯ ಹೆಸರು ರಮೇಶ್ ಚಂದ್ರ ಸೇಥಿ. ಸುಶ್ರೀ 10 ಕಿ.ಮೀ. ನಡೆದುಕೊಂಡು ಜಿಲ್ಲಾಧಿಕಾರಿ ಕಚೇರಿ ತಲುಪಿ, ಅಲ್ಲಿ ಜಿಲ್ಲಾಧಿಕಾರಿ ಸಮರ್ಥ ವರ್ಮಾಗೆ ತಂದೆಯ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾಳೆ.

ದೂರಿನಲ್ಲಿ ಬಾಲಕಿ ಹೇಳಿರುವುದಿಷ್ಟು- ತಾಯಿ ತೀರಿಕೊಂಡು ಎರಡು ವರ್ಷ ಆಗಿದೆ. ತಂದೆ ಮರುಮದುವೆಯಾಗಿದ್ದು, ನನ್ನ ಪಾಲನೆ ಮಾಡುತ್ತಿಲ್ಲ. ಮಾವನ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದೇನೆ. ಕೋವಿಡ್ 19 ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟದ ಹಣವನ್ನು ಶಾಲಾ ಅಧಿಕೃತರು ವಿದ್ಯಾರ್ಥಿಗಳ ಮತ್ತು ಪಾಲಕರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದಾರೆ. ಜತೆಗೆ ಅಕ್ಕಿಯನ್ನೂ ನೀಡುತ್ತಿದ್ದಾರೆ. ಆದರೆ, ತನಗೆ ಮಾತ್ರ ಇದು ಲಭ್ಯವಾಗುತ್ತಿಲ್ಲ. ನನ್ನ ಪಾಲಿನ ಅಕ್ಕಿ ಮತ್ತು ಹಣವನ್ನು ತಂದೆಯೇ ಉಪಯೋಗಿಸುತ್ತಿದ್ದಾರೆ.

ಈ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿ ಸಮರ್ಥ ವರ್ಮಾ, ಜಿಲ್ಲಾ ವಿದ್ಯಾಧಿಕಾರಿಗೆ ಕರೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ. ತಂದೆ ತೆಗೆದುಕೊಂಡ ಹಣ ಕೂಡ ವಾಪಸ್​ ವಿದ್ಯಾರ್ಥಿನಿ ಖಾತೆಗೆ ಜಮೆ ಮಾಡುವಂತೆ ಹಾಗೂ ಅಕ್ಕಿಯನ್ನು ಪೂರೈಸುವಂತೆ ಸೂಚಿಸಿದ್ದಾರೆ. ನಿತ್ಯವೂ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿಯನ್ನು ಸರ್ಕಾರ ಪೂರೈಸುತ್ತಿದೆ ಮತ್ತು ದಿನಕ್ಕೆ 8.10 ರೂಪಾಯಿಯನ್ನು ವಿದ್ಯಾರ್ಥಿಗಳ ಖಾತೆಗೆ ವರ್ಗಾಯಿಸುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net