

ಬೆಳಗಾವಿ: ಗೆಳತಿಯ ಮನೆಗೆಂದು ಹೊರಟಿದ್ದ ವಿದ್ಯಾರ್ಥಿನಿಯೊಬ್ಬಳು ಮಾರ್ಗಮಧ್ಯೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯೊಂದನ್ನು ತುಳಿದು ದಾರುಣವಾಗಿ ಮೃತಪಟ್ಟಿದ್ದಾಳೆ. ಬೆಳಗಾವಿ ಜಿಲ್ಲೆಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುಲೀಕಟ್ಟಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಚೂನವ್ವ ಹನಮಂತ ಸರ್ವಿ (8) ಸಾವಿಗೀಡಾಗಿದ್ದಾಳೆ. ಶಾಲೆಯಿಂದ ಮನೆಗೆ ಮರಳಿದ್ದ ಇವಳು ಬಳಿಕ ಅಭ್ಯಾಸಕ್ಕೆಂದು ಗೆಳತಿಯ ಮನೆಗೆ ಹೊರಟಿದ್ದಳು.
ಮಾರ್ಗಮಧ್ಯೆ ಗದ್ದೆಯೊಂದರಲ್ಲಿ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದನ್ನು ಗಮನಿಸದೆ ಈಕೆ ತುಳಿದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಹಾಗೂ ಗೋಕಾಕ ಗ್ರಾಮೀಣ ಠಾಣಾ ಪೊಲೀಸರ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.