

ನವದೆಹಲಿ : ದಿನನಿತ್ಯ 25,000 ಕ್ಕೂ ಹೆಚ್ಚು ಹೊಸ ಕರೊನಾ ಪ್ರಕರಣಗಳು ವರದಿಯಾಗುತ್ತಿರುವ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್ಡೌನ್ ಮುಂದುವರಿಯಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ಏಪ್ರಿಲ್ 19 ರಿಂದ ದೆಹಲಿಯಲ್ಲಿ ಲಾಕ್ಡೌನ್ ವಿಧಿಸಲ್ಪಟ್ಟಿದೆ.
ಆಮ್ ಆದ್ಮಿ ಪಕ್ಷದ ಆಳ್ವಿಕೆಯಲ್ಲಿರುವ ದೆಹಲಿಯು ಕರೊನಾ ಹರಡುವಿಕೆಯಿಂದ ತತ್ತರಿಸಿದ್ದು, ಸೋಂಕಿನ ಪಾಸಿಟಿವಿಟಿ ರೇಟ್ ಶೇ. 30 ಮೀರಿದೆ. ದೆಹಲಿಯ ಆ್ಯಕ್ಟೀವ್ ಕೇಸ್ ಲೋಡ್ 1 ಲಕ್ಷ ತಲುಪುವ ಹಂತದಲ್ಲಿದ್ದು, ಕರೊನಾ ಸೋಂಕಿತರು ಆಸ್ಪತ್ರೆಗಳನ್ನು ತುಂಬಿದ್ದಾರೆ. ಕರೊನಾ ಚಿಕಿತ್ಸೆ ಒದಗಿಸುತ್ತಿರುವ ಹಲವು ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಮತ್ತು ಔಷಧಿಗಳ ಕೊರತೆ ವಿಪರೀತ ಸಮಸ್ಯೆ ನೀಡುತ್ತಿದೆ.
ಹಾಲಿ ಜಾರಿಯಲ್ಲಿರುವ ಲಾಕ್ಡೌನ್ ಅವಧಿಯು ಸೋಮವಾರ (ಮೇ 3) ಬೆಳಿಗ್ಗೆ 5 ಗಂಟೆಗೆ ಕೊನೆಗೊಳ್ಳಲಿತ್ತು. ಇದೀಗ ದೆಹಲಿ ಸರ್ಕಾರ ಮತ್ತೆ ಒಂದು ವಾರದ ಮಟ್ಟಿಗೆ ಲಾಕ್ಡೌನ್ಅನ್ನು ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. (ಏಜೆನ್ಸೀಸ್)