

ವಿಜಯಪುರ: ಮೈಕ್ರೋಫೈನಾನ್ಸ್ ಹಾವಳಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಕಠಿಣ ಕ್ರಮ ಕೈಗೊಳ್ಳಲು ಮತ್ತು ಬಲಿಷ್ಠ ಕಾನೂನು ತರಲು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಡಾ.ಎಂ.ಬಿ. ಪಾಟೀಲ ತಿಳಿಸಿದರು.
ಕ್ಯಾಬಿನೆಟ್‌ನಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ, ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಇದನ್ನು ಮಟ್ಟ ಹಾಕಲು ಬಲಿಷ್ಠ ಕ್ರಮ ಕೈಗೊಳ್ಳಲು ನಮ್ಮೆಲ್ಲರ ಸಮ್ಮುಖದಲ್ಲಿಯೇ ಸೂಚಿಸಿದ್ದಾಗಿ ಶನಿವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮೈಕ್ರೋಫೈನಾನ್ಸ್ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಂದಿದ್ದ ಕಾನೂನಿನ ಸ್ಥಿತಿಗತಿ ಏನಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆ ಬಿಲ್ ಸರಿಯಾಗಿರಲಿಲ್ಲವೆಂದೇ ಭಾವಿಸಬೇಕಾಗುತ್ತದೆ. ಈವರೆಗೆ ಕಡಿವಾಣ ಬಿದ್ದಿಲ್ಲವೆಂದರೆ ಆ ಕಾಯ್ದೆ ಸರಿ ಇಲ್ಲ ಎಂದೇ ಹೇಳಬೇಕಾಗುತ್ತದೆ. ಹೀಗಾಗಿ ನಮ್ಮ ಸರ್ಕಾರ ಈಗ ಹೊಸ ಕಾನೂನು ತರಲು ಮುಂದಾಗಿದೆ ಎಂದರು.
ಅಲ್ಲದೇ, ಈ ಪ್ರಕರಣ ಕುರಿತು ಹಗುರವಾಗಿ ತೆಗೆದುಕೊಳ್ಳುವುದು ಬೇಡ. ಇದೊಂದು ಗಂಭೀರ ವಿಷಯ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಅಷ್ಟೇ ಗಂಭೀರವಾಗಿದ್ದಾರೆ. ಶೀಘ್ರದಲ್ಲೇ ಬಲಿಷ್ಠ ಕಾನೂನು ತಂದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ಮೇಲಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಲು ಮುಂದಾಗಿರುವ ವಿಚಾರದ ಕುರಿತು ಬಿಜೆಪಿ ನಾಯಕರು ನೀಡಿರುವ ತರಹೇವಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ, ಬಿಜೆಪಿಯವರಿಗೆ ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲವೇ? ಎಂದರಲ್ಲದೇ, ಇನ್ನೂ ಸಿಬಿಐ ತನಿಖೆ ಇದೆ ಎಂದರೆ ಅರ್ಥ ಏನು? ಸಿಬಿಐ ಬಿಜೆಪಿಯ ಅಂಗ ಸಂಸ್ಥೆಯಾ? ಎಂದರು.