ಬೈಂದೂರು: ವಿವಿಧ ಬೇಡಿಕೆ ಆಗ್ರಹಿಸಿ ಬೈಂದೂರು ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಕಚೇರಿ ಎದುರು ಗುರುವಾರ ಮುಷ್ಕರ ನಡೆಯಿತು.
ಬೈಂದೂರು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಅಧ್ಯಕ್ಷ ಗಣೇಶ ಮೇಸ್ತ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಐದಾರು ಗ್ರಾಮಗಳ ಜವಾಬ್ದಾರಿ ನೀಡಿರುವುದರಿಂದ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗದೆ ಒತ್ತಡದ ಬದುಕು ನಡೆಸುವಂತಾಗಿದೆ. ಸರ್ಕಾರದ ಹತ್ತಾರು ಹೊಸ ತಂತ್ರಾಂಶಗಳ ಕೆಲಸವನ್ನು ಯಾವುದೇ ಸೌಲಭ್ಯ ನೀಡದೆ ನಿರ್ವಹಿಸುವ ಜತೆಗೆ ಸಿಬ್ಬಂದಿ ಕೊರತೆ, ಕಂದಾಯ ನಿರ್ವಹಣೆ, ಹತ್ತಾರು ಜವಾಬ್ದಾರಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹೇರಲಾಗಿದೆ. ಹೀಗಾಗಿ ನಮ್ಮ ಬೇಡಿಕೆ ಶೀಘ್ರವಾಗಿ ಈಡೇರಿಸುವವರಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಬೈಂದೂರು ತಹಸೀಲ್ದಾರ ಪ್ರದೀಪ ಆರ್. ಮೂಲಕ ಮನವಿ ನೀಡಲಾಯಿತು. ಸಂಘದ ಉಪಾಧ್ಯಕ್ಷ ಸಂದೀಪ್ ಭಂಡಾರ್ಕರ್, ಪ್ರಧಾನ ಕಾರ್ಯದರ್ಶಿ ವೀರೇಶ್, ಬೈಂದೂರು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಸರ್ವ ಸದಸ್ಯರು ಇದ್ದರು.