

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಿಂದ ಉಂಟಾಗಿರುವ ಅಹಿತಕರ ವಾತಾವರಣವನ್ನು ತಿಳಿಗೊಳಿಸಬೇಕು. ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಸೋಮವಾರ ಮುಖ್ಯಮಂತ್ರಿ, ಗೃಹಸಚಿವರಿಗೆ, ಜಿಲ್ಲಾಧಿಕಾರಿಗೆ ತಹಸೀಲ್ದಾರ್ ಮೂಲಕ ಮತ್ತು ಎಸ್‌ಐಟಿ ಅಧಿಕಾರಿಗಳಿಗೆ, ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪಡೆದಿರುವ ಗೌರವಗಳಿಂದ ಅಸೂಯೆಗೊಳಗಾಗಿರುವ ಕೆಲವರು ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ಸಾಮಾಜಿಕ ಕಂದಕ ಸೃಷ್ಟಿಸುತ್ತಾ, ಸಾಮಾಜಿಕ ಶಾಂತಿ ಕದಡುವ ಪ್ರಯತ್ನಗಳೂ ನಡೆಯುತ್ತಿವೆ. ಇನ್ನು ಮುಂದೆ ಇದೇ ಕಾರಣ ಮುಂದಿಟ್ಟುಕೊಂಡು ಶ್ರೀ ಕ್ಷೇತ್ರದ ಮೇಲಿನ ದಾಳಿಯನ್ನು ತಾಲೂಕಿನ ಜವಾಬ್ದಾರಿಯುತ ನಾಗರಿಕರು ಸಹಿಸಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕುರಿತಾದ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಿ, ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತನಿಖೆಯನ್ನು ಶ್ರೀದಲ್ಲಿ ಪೂರ್ತಿಗೊಳಿಸಿ, ಕುಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಶ್ರೀ ಕ್ಷೇತ್ರದ ಪಾವಿತ್ರ್ಯತೆ ಮತ್ತು ನತೆಗಳಿಗೆ ಯಾವುದೇ ಚ್ಯುತಿ ಬರದಂತೆ ಮಾಡಬೇಕು. ಷಡ್ಯಂತ್ರದ ಪರಿಣಾಮವಾಗಿ ರಾಜ್ಯ ಸರ್ಕಾರವು ಅನಗತ್ಯವಾಗಿ ವೆಚ್ಚ ಮಾಡಬೇಕಾಗಿ ಬಂದ ಎಲ್ಲ ಮೊತ್ತಗಳನ್ನೂ ಈ ಷಡ್ಯಂತ್ರಕ್ಕೆ ಭಾಗಿಗಳಾದವರಿಂದಲೇ ವಸೂಲಿ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಬಿ.ಕೆ.ಧನಂಜಯ ರಾವ್, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಪ್ರಮುಖರಾದ ಪೂರಣ್‌ವರ್ಮ, ಯು.ಸಿ.ಪೌಲೋಸ್, ಮೋಹನ್ ಕುಮಾರ್, ರಾಜೇಶ್ ಪೈ, ವಸಂತ ಸಾಲ್ಯಾನ್ ಕಾಪಿನಡ್ಕ, ಯೋಗೀಶ್ ಕುಮಾರ್ ನಡಕ್ಕರ, ವೆಂಕಟರಮಣ ಹೆಬ್ಬಾರ್, ಶಿವಪ್ರಸಾದ್ ಅಜಿಲ, ಪಿ.ಕೆ.ರಾಜು ಪೂಜಾರಿ, ಡಿ.ಎ.ರೆಹಮಾನ್, ಶಾರದಾ ರೈ, ನಿತ್ಯಾನಂದ ನಾವರ, ವಿವೇಕ್ ವಿನ್ಸೆಂಟ್ ಪಾಸ್, ಲಕ್ಷಣ ಸಪಲ್ಯ, ಈಶ್ವರ ಬೈರ, ಜಗದೀಶ್, ಪ್ರಶಾಂತ್ ಜೈನ್, ಎಂ.ಪಿ.ಶ್ರೀನಾಥ್, ಜಯಶಂರ ಶರ್ಮ, ರಾಜಶೇಖರ ಅಜ್ರಿ, ಯೋಗೀಶ್ ಮೇಲಂತಬೆಟ್ಟು, ಬಾಲಕೃಷ್ಣ ಶೆಟ್ಟಿ ಸವಣಾಲು, ಪ್ರಮೋದ್ ಜೈನ್, ಪುಷ್ಪಾ ಶೆಟ್ಟಿ ಉಜಿರೆ ಮತ್ತಿತರರು ಉಪಸ್ಥಿತರಿದ್ದರು.