

ನವದೆಹಲಿ : ದೆಹಲಿಯ ಏಮ್ಸ್ ನಿರ್ದೇಶಕರಾದ ಡಾ. ರಣದೀಪ್ ಗುಲೇರಿಯ ಅವರು ಕರೊನಾ ರೋಗಿಗಳ ಚಿಕಿತ್ಸೆ ಮಾಡುವಾಗ ಮೆಡಿಕಲ್ ಪ್ರೋಟೋಕಾಲ್ಅನ್ನು ಸರಿಯಾಗಿ ಪಾಲಿಸುವ ಅಗತ್ಯದ ಬಗ್ಗೆ ಒತ್ತು ನೀಡಿದ್ದಾರೆ. ಕರೊನಾ ಸೋಂಕಿತರು ಬ್ಲಾಕ್ ಫಂಗಸ್ನ ಬಾಧೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸ್ಟೆರಾಯ್ಡ್ಗಳನ್ನು ಬೇಜವಾಬ್ದಾರಿಯಾಗಿ ಬಳಸಬಾರದೆಂದು ಎಚ್ಚರಿಸಿದ್ದಾರೆ.
"ಕರೊನಾ ಪ್ರಕರಣಗಳು ಹೆಚ್ಚುತ್ತಿರುವಂತೆ, ಆಸ್ಪತ್ರೆಗಳಲ್ಲಿ ಇನ್ಫೆಕ್ಷನ್ ಕಂಟ್ರೋಲ್ ಪ್ರಾಕ್ಟೀಸಸ್ನ ಪ್ರೊಟೊಕಾಲ್ ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಫಂಗಸ್ ಮತ್ತು ಬ್ಯಾಕ್ಟೀರಿಯಗಳಿಂದ ಉಂಟಾಗುತ್ತಿರುವ ಸೆಕೆಂಡರಿ ಇನ್ಫೆಕ್ಷನ್ಸ್ನಿಂದ ಹೆಚ್ಚು ಸಾವು ಸಂಭವಿಸುತ್ತಿರುವುದು ಕಂಡುಬಂದಿದೆ" ಎಂದು ಡಾ. ಗುಲೇರಿಯಾ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬ್ಲಾಕ್ ಫಂಗಸ್ ಅಥವಾ ಮ್ಯೂಕರ್ಮೈಕೋಸಿಸ್ನ ಸ್ಪೋರ್ಗಳು ಮಣ್ಣು, ಗಾಳಿ ಮತ್ತು ಊಟದಲ್ಲೂ ಇರುತ್ತವೆ. ಆದರೆ ಅವು ಸಾಮಾನ್ಯವಾಗಿ ಬಾಧಕವಲ್ಲ ಮತ್ತು ಸೋಂಕುಂಟು ಮಾಡುವುದಿಲ್ಲ. ಕೋವಿಡ್ನ ಮುಂಚೆ ಬಹಳ ಕಡಿಮೆ ಪ್ರಕರಣಗಳಿದ್ದವು. ಈಗ ಕೋವಿಡ್ನಿಂದಾಗಿ ಹೆಚ್ಚು ಕೇಸುಗಳು ವರದಿಯಾಗುತ್ತಿವೆ. ಮೂಕರ್ಮೈಕೋಸಿಸ್ ಸೋಂಕಿನ ಹಿಂದಿನ ಬಹುದೊಡ್ಡ ಕಾರಣವೆಂದರೆ ಸ್ಟೆರಾಯ್ಡ್ಗಳ ದುರ್ಬಳಕೆ ಎಂದಿದ್ದಾರೆ.
"ಡಯಾಬೆಟೀಸ್ ಇರುವ, ಕೋವಿಡ್ ಪಾಸಿಟೀವ್ ಆಗಿರುವ ಮತ್ತು ಸ್ಟೆರಾಯ್ಡ್ಗಳನ್ನು ತೆಗೆದುಕೊಳ್ಳುತ್ತಿರುವ ರೋಗಿಗಳಲ್ಲಿ ಫಂಗಲ್ ಇನ್ಫೆಕ್ಷನ್ನ ಸಾಧ್ಯತೆಗಳು ಹೆಚ್ಚಿವೆ. ಅದನ್ನು ತಡೆಯಲು ನಾವು ಸ್ಟೆರಾಯ್ಡ್ಗಳ ದುರ್ಬಳಕೆಯನ್ನು ನಿಲ್ಲಿಸಬೇಕು" ಎಂದು ಗುಲೇರಿಯಾ ಹೇಳಿದ್ದಾರೆ.
ಏಮ್ಸ್ ಆಸ್ಪತ್ರೆಯಲ್ಲಿ 23 ರೋಗಿಗಳಿಗೆ ಫಂಗಲ್ ಇನ್ಫೆಕ್ಷನ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ 20 ಜನ ಕೋವಿಡ್ ಪಾಸಿಟಿವ್, 3 ಜನ ಕೋವಿಡ್ ನೆಗೆಟೀವ್ ಆಗಿದ್ದಾರೆ. ಹಲವು ರಾಜ್ಯಗಳು 500 ಕ್ಕೂ ಹೆಚ್ಚು ಮ್ಯೂಕರ್ಮೈಕೋಸಿಸ್ನ ಪ್ರಕರಣಗಳನ್ನು ವರದಿ ಮಾಡಿವೆ. ಈ ಶಿಲೀಂಧ್ರದ ಸೋಂಕು ಮುಖದ ಮೇಲೆ ಪರಿಣಾಮ ಬೀರಬಹುದು. ಮೂಗಿಗೆ, ಕಣ್ಣಿನ ಕಕ್ಷೆ ಅಥವಾ ಮೆದುಳಿಗೆ ಸೋಂಕು ತಗುಲಿಸುತ್ತದೆ. ಇದರಿಂದ ದೃಷ್ಟಿ ನಷ್ಟ ಸಹ ಉಂಟಾಗಬಹುದು ಮತ್ತು ಇದು ಶ್ವಾಸಕೋಶಕ್ಕೂ ಹರಡಬಹುದು ಎಂದು ಡಾ.ಗುಲೇರಿಯ ಎಚ್ಚರಿಸಿದ್ದಾರೆ. (ಏಜೆನ್ಸೀಸ್)