ಯಾರದ್ದೋ ಹೆಸರು ಇನ್ಯಾರದ್ದೋ ಫೋಟೋ! ಮತ್ತೆ ಟ್ರೋಲ್​ ಆದ ಕಾಂಗ್ರೆಸ್

congresf
Published on

ನವದೆಹಲಿ: ಕಾಂಗ್ರೆಸ್​ ಪಕ್ಷ ಆಗಾಗ ಸಣ್ಣ ಪುಟ್ಟ ತಪ್ಪುಗಳನ್ನ ಮಾಡಿ ಟ್ರೋಲಿಗರ ಕಣ್ಣಿಗೆ ತುತ್ತಾಗುತ್ತಿರುತ್ತದೆ. ಇದೀಗ ಅದೇ ರೀತಿ ದೊಡ್ಡದೊಂದು ತಪ್ಪನ್ನು ಮಾಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.

ಶನಿವಾರದಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುಣ್ಯ ತಿಥಿ ಇತ್ತು. ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಆಗಿದ್ದ ಅವರನ್ನು ಪೂರ್ತಿ ದೇಶ ಸ್ಮರಿಸಿಕೊಂಡಿದೆ. ಅದೇ ರೀತಿ ಕಾಂಗ್ರೆಸ್​ ಕೂಡ ಕಾರ್ಯಪ್ಪ ಅವರನ್ನು ಸ್ಮರಿಸಿದೆ. ಆದರೆ ಆ ಸ್ಮರಣೆಯಿಂದಲೇ ಟ್ರೋಲಿಗರ ಬಾಯಿಗೆ ತುತ್ತಾಗಿದೆ.

ಕಾಂಗ್ರೆಸ್​ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಕಾರ್ಯಪ್ಪ ಅವರನ್ನು ಸ್ಮರಿಸಿ ಒಂದು ಫೋಟೋ ಹಾಕಿ ಅದರ ಜತೆ ಕೆಲ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೆ ಫೋಟೋ ಹಾಕುವಾಗ ಕಾರ್ಯಪ್ಪ ಅವರ ಫೋಟೋ ಬದಲಾಗಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ ಷಾ ಅವರ ಫೋಟೋವನ್ನು ಹಾಕಲಾಗಿತ್ತು. ಈ ರೀತಿಯ ಟ್ವೀಟ್​ ಮಾಡುತ್ತಿದ್ದಂತೆಯೇ ನೆಟ್ಟಿಗರು ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.

ಪೋಸ್ಟ್​ ಆದ ಕೆಲವೇ ಕ್ಷಣಗಳಲ್ಲಿ ಅದನ್ನು ತೆಗೆಯಲಾಗಿದೆಯಾದರೂ ಹಲವರು ಅದರ ಸ್ಕ್ರೀನ್​ಶಾಟ್​ ತೆಗೆದುಕೊಂಡು ಟ್ರೋಲ್​ ಮಾಡುತ್ತಿದ್ದಾರೆ. ಬಿಜೆಪಿ ಎಂಪಿ ರಾಜೀವ್​ ಚಂದ್ರಶೇಖರ್​ ಸೇರಿದಂತೆ ಅನೇಕ ಗಣ್ಯರೂ ಈ ಟ್ವೀಟ್​ನ್ನು ಶೇರ್​ ಮಾಡಿಕೊಂಡು ಕಾಂಗ್ರೆಸ್​ನ ತಪ್ಪನ್ನು ಎತ್ತಿ ತೋರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net