ತುಂಬಾಕು ಉತ್ಪನ್ನಗಳಿಂದ ದೂರವಿರಿ: ಡಾ. ಪ್ರತಿಮಾ ಮೂರ್ತಿ ಸಲಹೆ

Sudhee_28_World_No_Tobacco_Day_@_NIMHANS (2)
Published on

ಬೆಂಗಳೂರು: ತಂಬಾಕು ಬಳಕೆಯಿಂದ ಕ್ಯಾನ್ಸರ್ ಸೇರಿ ಹಲವು ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ತಂಬಾಕು ಉತ್ಪನ್ನಗಳಿಂದ ಅಂತರ ಕಾಯ್ದುಕೊಂಡು, ಆರೋಗ್ಯಕರ ಜೀವನ ವಿಧಾನ ಅಳವಡಿಸಿಕೊಳ್ಳಿರಿ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಕರೆ ನೀಡಿದ್ದಾರೆ.

ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹಳಷ್ಟು ಮಂದಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ತಂಬಾಕು ಉತ್ಪನ್ನಗಳ ಸೇವನೆ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಉಸಿರಾಟದ ತೊಂದರೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದೆ. ಭವಿಷ್ಯದಲ್ಲಿ ಬಹಳಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಜನರಲ್ಲಿ ತಂಬಾಕಿನ ದುಷ್ಪರಿಣಾಮದ ಬಗ್ಗೆ ಅರಿವು ಹೆಚ್ಚಬೇಕು. ಈ ಬಗ್ಗೆ ಯುವಜನರು ಜಾಗೃತರಾಗಬೇಕು ಎಂದು ಹೇಳಿದರು.

ಪರೋಕ್ಷ ಧೂಮಪಾನವೂ ನೇರ ಧೂಮಪಾನಕ್ಕೆ ಸಮಾನ. ಇದರಿಂದ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೆಚ್ಚಿನ ಸಮಸ್ಯೆ ಎದುರಿಸುತ್ತಾರೆ. ಕುಟುಂಬದ ಸದಸ್ಯರೊಬ್ಬರು ತಂಬಾಕು ಉತ್ಪನ್ನಗಳನ್ನು ಸೇವಿಸಿದರೆ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಆಗುತ್ತದೆ. ಒಟಿಟಿ ವೇದಿಕೆಯಂತಹ ಮನರಂಜನೆ ಮಾಧ್ಯಮಗಳು ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ಸಂದೇಶ ಪ್ರಸಾರ ಮಾಡಿ, ಜಾಗೃತಿ ಮೂಡಿಸಬೇಕು ಎಂದರು.

ಮಕ್ಕಳಿಗೆ ಮಾರ್ಗದರ್ಶನದ ಅಗತ್ಯವಿದೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್. ಶಿವರಾಮು ಮಾತನಾಡಿ, 13ರಿಂದ 15 ವರ್ಷ ವಯಸ್ಸಿನಲ್ಲೇ ಮಕ್ಕಳಲ್ಲಿ ಬದಲಾವಣೆ ಕಾಣಬಹುದಾಗಿದೆ. ಅದರಲ್ಲಿ ತಂಬಾಕು ಗೀಳೂ ಒಂದು. ಹಾಗಾಗಿ ಈ ಅವಧಿಯಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಪಠ್ಯ ಬೋಧನೆ ಜತೆಗೆ ಉತ್ತಮ ನಾಗರಿಕನನ್ನಾಗಿ ರೂಪಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಹೊಗೆಸೊಪ್ಪು ಬೆಳೆಯುವುದನ್ನೇ ನಿಲ್ಲಿಸಲು ಸಾಧ್ಯವಿಲ್ಲ. ಇದು ಕೆಲ ಔಷಧಗಳಿಗೆ ಬಳಕೆಯಾಗುತ್ತದೆ. ಆದರಿಂದ ಹೊಗೆಸೊಪ್ಪು ಬೆಳೆಯುವ ಪ್ರದೇಶ ಕಡಿಮೆ ಮಾಡಬಹುದು ಎಂದು ಹೇಳಿದರು.

ನಿಮ್ಹಾನ್ಸ್ ಮನೋವೈದ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿವೇಕ್ ಬೆನೆಗಲ್, ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬ್ಲ್ ಅಡಲ್ಟ್ ಟೊಬ್ಯಾಕೊ ಸಮೀಕ್ಷೆ ಪ್ರಕಾರ ದೇಶದಲ್ಲಿ ತಂಬಾಕು ಉತ್ಪನ್ನ ಸೇವಿಸುವ ಯುವಜನರ ಪ್ರಮಾಣ ಕಡಿಮೆಯಾಗಿದೆ. ಶಾಲಾ- ಕಾಲೇಜುಗಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡುತ್ತಿದೆ ಎಂದರು.

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಶೋಭಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net