ವಿಜಯವಾಣಿ ಸುದ್ದಿಜಾಲ ಉಳ್ಳಾಲ
ರಾಜ್ಯಾದ್ಯಂತ ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ತಲೆದೋರಿದೆ. ಈ ಬಗ್ಗೆ ‘ವಿಜಯವಾಣಿ’ ವರದಿಯನ್ನು ಉಲ್ಲೇಖಿಸಿ ಜನಶಿಕ್ಷಣ ಟ್ರಸ್ಟ್ ಬರೆದ ಪತ್ರಕ್ಕೆ ಮುಖ್ಯಮಂತ್ರಿಯ ಅಧೀನ ಕಾರ್ಯದರ್ಶಿ ಸ್ಪಂದಿಸಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಸರ್ಕಾರ 20 ಲಕ್ಷ ರೂ. ಅನುದಾನ ನೀಡುತ್ತಿದೆ. ಆದರೂ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಇಂದಿಗೂ ಘಟಕ ನಿರ್ಮಾಣ ಆಗಿಲ್ಲ. ಕೆಲವೊಂದು ಕಡೆ ಘಟಕ ಇದ್ದರೂ ನಿರ್ವಹಣೆ ಸಾಧ್ಯವಾಗದೆ ಖಾಸಗಿಗೆ ಗುತ್ತಿಗೆ ನೀಡಲಾಗಿದೆ.
ಘಟಕಗಳೇ ಇಲ್ಲದ ಪುರಸಭೆ, ಪಟ್ಟಣ, ನಗರ ಪಂಚಾಯಿತಿಗಳೂ ಇದ್ದು ಇಲ್ಲೆಲ್ಲಾ ಜಮೀನು ಇಲ್ಲ ಎನ್ನುವ ಉತ್ತರ ಸಿಗುತ್ತಿದೆ. ಈ ಎಲ್ಲ ಕಾರಣಗಳಿಂದ ಇಂದಿಗೂ ರಸ್ತೆ ಬದಿ ತ್ಯಾಜ್ಯ ರಾಶಿ ಬೀಳುವುದು ತಪ್ಪಿಲ್ಲ. ಸ್ವಚ್ಛ ಭಾರತ ಪರಿಕಲ್ಪನೆ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಅಸಡ್ಡೆ ತೋರುತ್ತಿರುವುದರಿಂದ ಎಲ್ಲೆಂದರಲ್ಲಿ ಬಯಲು ಕಸಾಲಯ ಅಟ್ಟಹಾಸ ಬೀರುತ್ತಿದೆ.
ಈ ಬಗ್ಗೆ ‘ವಿಜಯವಾಣಿ’ ನಿರಂತರ ವರದಿಗಳನ್ನು ಪ್ರಕಟಿಸಿ ಅಧಿಕಾರಿ ಮತ್ತು ಆಡಳಿತ ವರ್ಗವನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಲೇ ಇದೆ. ಸೆ.4ರ ‘ವಿಜಯವಾಣಿ’ಯಲ್ಲಿ ‘ಕಸ ವಿಲೇವಾರಿ, ಗ್ರಾ.ಪಂ. ಸಮಸ್ಯೆ ತಹರೇವಾರಿ’ ಶೀರ್ಷಿಕೆಯಡಿ ರಾಜ್ಯಮಟ್ಟದ ವರದಿ ಪ್ರಕಟಗೊಂಡಿತ್ತು. ಈ ವರದಿಯ ಆಧಾರದಲ್ಲಿ ಮುಡಿಪು ಜನಶಿಕ್ಷಣ ಟ್ರಸ್ಟ್ ವತಿಯಿಂದ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಅವರು ಮುಖ್ಯಮಂತ್ರಿಯ ಅಧೀನ ಕಾರ್ಯದರ್ಶಿಗೆ ಪತ್ರ ಬರೆದು, ‘ಶೂನ್ಯ ಕಸ ನಿರ್ವಹಣೆ ಮೂಲಕ ತ್ಯಾಜ್ಯ ಮುಕ್ತ ಗ್ರಾಮಗಳ ನಿರ್ಮಾಣ’ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಈ ಪತ್ರಕ್ಕೆ ಮುಖ್ಯಮಂತ್ರಿಯ ಅಧೀನ ಕಾರ್ಯದರ್ಶಿ ಸ್ಪಂದಿಸಿದ್ದು, ಪತ್ರ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ‘ವಿಜಯವಾಣಿ’ಯಲ್ಲಿ ಪ್ರಕಟಗೊಳ್ಳುತ್ತಿರುವ ನಿರಂತರ ವರದಿ ಮತ್ತು ಮುಖ್ಯಮಂತ್ರಿ ಅಧೀನ ಕಾರ್ಯದರ್ಶಿಯವರ ಸ್ಪಂದನೆಗೆ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಮತ್ತು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಹರ್ಷ ವ್ಯಕ್ತಪಡಿಸಿದ್ದಾರೆ.