ಉಳ್ಳಾಲ: ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಡಿ.6ರಿಂದ 8ರವರೆಗೆ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳ ನಡೆಯಲಿದ್ದು, ಸರ್ವಸಿದ್ಧತೆ ನಡೆಯುತ್ತಿವೆ ಎಂದು ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಹೇಳಿದರು.
4ನೇ ವರ್ಷದ ಕೃಷಿ ಮೇಳ ಇದಾಗಿದ್ದು, ಚಪ್ಪರ ಮುಹೂರ್ತ ನೆರವೇರಿಸಲಾಗಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಸ್ಕಾೃಡ್ ಲಿಮಿಟೆಡ್ ಅಧ್ಯಕ್ಷ ರವೀಂದ್ರ ಕಂಬಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಅದಾನಿ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಆರ್ಥಿಕ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ, ಸ್ಥಳೀಯಾಡಳಿತ ಸಮಿತಿ ಸದಸ್ಯರು, ಶಿಕ್ಷಣಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ನಂತರದ ಶಿಕ್ಷಣ ಮತ್ತು ಉದ್ಯೋಗದ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಶ್ರೇಷ್ಠ ಭಾರತ್’ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಏಳಿಗೆ ಕುರಿತು ಕೃಷಿ ತಜ್ಞರು ಮಾಹಿತಿ ನೀಡಲಿದ್ದಾರೆ. ಕೃಷಿ, ಆಹಾರ, ವಿವಿಧ ಇಲೆಕ್ಟ್ರಾನಿಕ್ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಇರಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಯಕ್ಷಗಾನ ಬಯಲಾಟ, ಗಾನ ವೈವಿಧ್ಯ, ನೃತ್ಯ ಸಂಭ್ರಮ, ಹರಿಕಥೆ ನಡೆಯಲಿದೆ ಎಂದರು.
ಮೇಳಗಳ ಅಧ್ಯಕ್ಷ ಜಯರಾಮ ಶೆಟ್ಟಿ ಕಂಬ್ಳಪದವು, ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ಸಲಹೆಗಾರ ಉಪೇಂದ್ರ ನಾಯಕ್ ಮೂಡುಬಿದಿರೆ, ಜತೆಕಾರ್ಯದರ್ಶಿಗಳಾದ ವಿಶ್ವನಾಥ್ ಕಡ್ವಾಯಿ, ರಂಜಿತ್ ಮಿತ್ತಾವು, ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಅಭ್ಯರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್
ಸರ್ಕಾರಿ, ಖಾಸಗಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ವಿವಿಧ ಖಾಸಗಿ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು ಕ್ಯಾಂಪಸ್ ಆಯ್ಕೆ ಮೂಲಕ ಉದ್ಯೋಗಾರ್ಥಿಗಳ ಆಯ್ಕೆಯಾಗಲಿದೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ಯಂತ್ರೋಪಕರಣಗಳು, ಸಾವಯವ ಬಿತ್ತನೆ ಬೀಜಗಳು, ರಸಗೊಬ್ಬರಗಳು ಲಭ್ಯವಿರಲಿದೆ. ಜತೆಗೆ ರ‌್ಯಾಜ್ಯದ ವಿವಿಧೆಡೆಯಿಂದ ನರ್ಸರಿ ಸಂಸ್ಥೆಗಳು ಭಾಗವಹಿಸಲಿದ್ದು, ದೋಣಿ ವಿಹಾರ, ಆಟೋಟ ಮತ್ತು ತಿನಿಸುಗಳು ಸಹಿತ ಒಟ್ಟು 306 ಮಳಿಗೆಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ಟಿ.ಜಿ.ರಾಜಾರಾಮ ಭಟ್ ಮಾಹಿತಿ ನೀಡಿದರು.