ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳ: ವಿವಿಧ ಕೋರ್ಸ್‌ಗಳ ಪರಿಚಯ

rajaram bhat
Published on

ಉಳ್ಳಾಲ: ಕೃಷಿ, ಶಿಕ್ಷಣ, ಉದ್ಯೋಗ ಈ ಮೂರು ಮೂಲ ಉದ್ದೇಶದೊಂದಿಗೆ ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ರಾಜ್ಯಮಟ್ಟದ ಶಿಕ್ಷಣ, ಉದ್ಯೋಗ, ಕೃಷಿ ಮೇಳ ಡಿ.6ರಿಂದ 8ರವರೆಗೆ ನಡೆಯಲಿದೆ ಎಂದು ಮೇಳದ ಸಮಿತಿ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂರು ದಿನಗಳ ಕಾಲ ನಡೆಲಿರುವ ಮೇಳದಲ್ಲಿ ವಿಪ್ರೋ, ಲಿನೆವೋ, ಇನ್ಫೋಸಿಸ್ ಸಹಿತ ಪ್ರತಿಷ್ಠಿತ ಐಟಿ ಕಂಪನಿಗಳನ್ನು ಆಹ್ವಾನಿಸಲಾಗಿದ್ದು, ರಾಜ್ಯಾದ್ಯಂತ ಉದ್ಯೋಗಾಕಾಂಕ್ಷಿಗಳು, ಕೃಷಿಕರು, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದರು.

ರಾಜ್ಯದ ಹಲವು ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಲವು ರೀತಿಗಳಲ್ಲಿ ಕೋರ್ಸ್‌ಗಳನ್ನು ಒದಗಿಸುತ್ತಿದ್ದರೂ, ಎಸ್ಸೆಸ್ಸೆಲ್ಸಿ, ಪಿಯುಸಿ,ಪದವಿ ಬಳಿಕ ಮುಂದೇನು? ಅನ್ನುವ ಕುತೂಹಲ ವಿದ್ಯಾರ್ಥಿ ಸಮೂಹದಲ್ಲಿದೆ. ಅಂತಹ ಕಾಲೇಜುಗಳನ್ನು ಗುರುತಿಸಿ ಒಟ್ಟು 37 ಕಾಲೇಜುಗಳನ್ನು ಜತೆಗೂಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಸಂಬಂಧಿತ ಕೋರ್ಸುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಶಿಕ್ಷಣ ಮೇಳ ಮಾತ್ರವಲ್ಲದೆ ಪದವೀಧರ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಮೇಳದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕ ಯಂತ್ರೋಪಕರಣ, ಸಾವಯವ ಬಿತ್ತನೆ ಬೀಜ, ರಸಗೊಬ್ಬರ ಮಳಿಗೆ ಜತೆ ಆಟಗಳ ಪ್ರಪಂಚ, ಆಕರ್ಷಕ ದೋಣಿ ವಿಹಾರ, ಆಹಾರ ವಸ್ತುಗಳು, ತಿಂಡಿ ತಿನಿಸುಗಳ ಸಹಿತ ಒಟ್ಟು 306 ಮಳಿಗೆಗಳು ಇರಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ, ಗಂಗಾವತಿ ಪ್ರಾಣೇಶ್ ಅವರ ಹಾಸ್ಯ, ಶಿವಮೊಗ್ಗತಂಡದಿಂದ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಮೇಳದ ಮೂಲಕ ಶಿಕ್ಷಣ ಸಂಸ್ಥೆ, ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳು, ಕೃಷಿ ಯಂತ್ರೋಪಕರಣಗಳ ತಯಾರಕರು, ಮಾರಾಟಗಾರರು, ಕೃಷಿ ಉತ್ಪನ್ನಗಳ ಮಾರಾಟಗಾರರು ಒಂದೇ ಕಡೆ ಸೇರುವಂತೆ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಸಂಸದ ಬ್ರಿಜೇಶ್ ಚೌಟ ಸಹಿತ ಹಲವು ಜನಪ್ರತಿನಿಧಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಕಂಬ್ಳಪದವು, ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ಜತೆ ಕಾರ್ಯದರ್ಶಿಗಳಾದ ವಿಶ್ವನಾಥ್ ಕಡ್ವಾಯಿ, ರಂಜಿತ್ ಮಿತ್ತಾವು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net