ರಾಜ್ಯ ಮಾನವ ಹಕ್ಕುಗಳ ಆಯೋಗದ ಹುದ್ದೆ ಖಾಲಿ

ವಿಜಯವಾಣಿ (25)
Published on

| ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು

ಭೂಮಿ ಮೇಲೆ ಹುಟ್ಟಿದ ದಿನದಿಂದಲೇ ಪ್ರತಿಯೊಬ್ಬರಿಗೂ ಸಿಗುವ ಹಕ್ಕು ಅಂದರೇ ‘ಮಾನವ ಹಕ್ಕು’. ಎರಡನೇ ಮಹಾಯುದ್ಧದ ಬಳಿಕ ‘ಮಾನವ ಹಕ್ಕುಗಳು’ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. 1948ರಲ್ಲಿ ಮಾನವ ಹಕ್ಕುಗಳು ಘೊಷಣೆಯಾದ ಸ್ಮರಣಾರ್ಥವಾಗಿ ಡಿಸೆಂಬರ್ 10ಕ್ಕೆ ವಿಶ್ವವ್ಯಾಪಿ ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಜಾಗತಿಕ ಮಾನದಂಡವಾಗಿ ಅಂಗೀಕರಿಸಿತ್ತು.

1993ರಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯ ಜಾರಿಗೆ ಬಂದು ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ಸಹ ರಚಿಸಲಾಯಿತು. 2007ರ ಜುಲೈ 25ರಂದು ‘ರಾಜ್ಯ ಮಾನವ ಹಕ್ಕುಗಳ ಆಯೋಗ’ ಅಸ್ತಿತ್ವಕ್ಕೆ ಬಂದಿದೆ. ಅಚ್ಚರಿ ಎಂದರೇ ಸಂವಿಧಾನಿಕ ಹುದ್ದೆ ಆಗಿರುವ ಈ ಆಯೋಗಕ್ಕೆ 2024ರ ಫೆಬ್ರವರಿ 29ರಿಂದ ಅಧ್ಯಕ್ಷರೇ ಇಲ್ಲವಾಗಿದೆ. ನಿವೃತ್ತ ಮುಖ್ಯ ನ್ಯಾಯಾಧೀಶ ಎಲ್. ನಾರಾಯಣಸ್ವಾಮಿ ಅವಧಿ ಪೂರ್ಣಗೊಂಡ ಮೇಲೆ ಸರ್ಕಾರ ಯಾರನ್ನೂ ನೇಮಕ ಮಾಡಿಲ್ಲ. ಹಂಗಾಮಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಟಿ. ಶ್ಯಾಮ್ ಭಟ್ ಅವರನ್ನು ನೇಮಕ ಮಾಡಿ ಸುಮ್ಮನಾಗಿದೆ. ಐಎಎಸ್ ದರ್ಜೆ ಹುದ್ದೆಯಾದ ಕಾರ್ಯದರ್ಶಿ ಹುದ್ದೆಯೂ ಖಾಲಿ ಇರುವುದು ಸರ್ಕಾರ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.

ವಿಶ್ವವ್ಯಾಪಿ ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಯಾವುದೇ ಆಯೋಜನೆ ಮಾಡಿಲ್ಲ. ಸೋಮವಾರವೇ ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿದ ಅಧಿಕಾರಿ ವರ್ಗ, ದೆಹಲಿ ವಿಮಾನ ಏರಿದೆ. ಜಾಗೃತಿ ಜಾಥಾ, ಶಿಬಿರ, ವಿಚಾರಗೋಷ್ಠಿ, ವಿದ್ಯಾರ್ಥಿಗಳಲ್ಲಿ ಅರಿವು ಮತ್ತಿತ್ತರ ಕಾರ್ಯಕ್ರಮ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಬದಲಿಗೆ ಅಧಿಕಾರಿಗಳು ದೆಹಲಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಹೋಗಿರುವುದು ಶೋಚನೀಯ ಸಂಗತಿಯಾಗಿದೆ.

66 ಸಾವಿರ ಕೇಸ್

ಎನ್​ಎಚ್​ಆರ್​ಸಿ 2023ರ ಡಿಸೆಂಬರ್ 1ರಿಂದ 2024ರ ನವೆಂಬರ್ 30ರವರೆಗೆ ದೇಶದಲ್ಲಿ 65,973 ಪ್ರಕರಣ ದಾಖಲಿಸಿದೆ. 109 ಸ್ವಯಂಪ್ರೇರಿತ ಪ್ರಕರಣಗಳಲ್ಲಿ ಅರಿವು ಮೂಡಿಸುವುದರ ಜತೆಗೆ ಸಂತ್ರಸ್ತರಿಗೆ 17.24 ಕೋಟಿ ರೂ. ಪರಿಹಾರ ನೀಡಿದೆ. 1993ರ ಅ.12ರಂದು ಎನ್​ಎಚ್​ಆರ್​ಸಿ ಆರಂಭವಾದಾಗಿನಿಂದ 2024ರ ನ.30ರವರೆಗೆ ಹಲವಾರು ಸ್ಥಳ ಪರಿಶೀಲನೆ, ಮುಕ್ತ ವಿಚಾರಣೆ ಮತ್ತು ಶಿಬಿರ ನಡೆಸಿದೆ. ಮೂರು ದಶಕದಲ್ಲಿ 23,14,794 ಪ್ರಕರಣ ದಾಖಲಾಗಿದ್ದು, ಈ ಪೈಕಿ 23,07,587 ವಿಲೇವಾರಿಯಾಗಿವೆ. ಇದರಲ್ಲಿ 2,880 ಸ್ವಯಂಪ್ರೇರಿತ ಪ್ರಕರಣಗಳೂ ಸೇರಿವೆ.

ಜಾಗೃತಿ ಮೂಡಿಸಬೇಕಿದೆ

ಮಾನವ ಹಕ್ಕುಗಳ ರಕ್ಷಣೆಗಾಗಿ ಆಯೋಗ ಇನ್ನಷ್ಟು ಶ್ರಮಿಸಬೇಕಿದೆ. ಜನರಲ್ಲಿ ಜಾಗೃತಿ, ಸಾರ್ವಜನಿಕರಿಗೆ ರಕ್ಷಣೆ ನೀಡುವುದು, ಮಾನವ ಹಕ್ಕುಗಳ ಉಲ್ಲಂಘನೆಗೆ ತುತ್ತಾದವರಿಗೆ ಪರಿಹಾರ ನೀಡಬೇಕಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವಲ್ಲಿ ಆಯೋಗ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಈ ಮಧ್ಯೆ, ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಕಾರ್ಖಾನೆ, ಖಾಸಗಿ ಕಚೇರಿಗಳಿಗೆ ತೆರಳಿ ಬೆದರಿಸಿ ಹಣ ವಸೂಲಿ ಮಾಡುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸರ್ಕಾರ ಇಂತಹ ನಡೆಗೆ ಕಡಿವಾಣ ಹಾಕಬೇಕಿದೆ.

ಯಾವೆಲ್ಲ ಪ್ರಕರಣ ತನಿಖೆ?

ಜೈಲಿನಲ್ಲಿ ಕೈದಿ ಸಾವು, ಪೊಲೀಸ್ ವಶದಲ್ಲಿ ಸಾವು, ಚಿತ್ರಹಿಂಸೆ, ಅತ್ಯಾಚಾರ ನಡೆದಾಗ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ದಾಖಲಾಗುತ್ತದೆ. ಅಲ್ಲದೆ, ಪೊಲೀಸ್ ಎನ್​ಕೌಂಟರ್, ಅಕ್ರಮ ಬಂಧನ, ಜೈಲು ಸ್ಥಿತಿಗತಿ, ಕೈದಿಗಳ ಹಕ್ಕುಗಳ ಉಲ್ಲಂಘನೆ, ವರದಕ್ಷಣೆ, ಚಿತ್ರಹಿಂಸೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ, ಮಕ್ಕಳ ಹಕ್ಕುಗಳ ಉಲ್ಲಂಘನೆ, ಮಾನಸಿಕ ಬದ್ಧಿಮಾಂದ್ಯ ಮಕ್ಕಳ ಕಾನೂನುಬದ್ಧ ಹಕ್ಕುಗಳ ಉಲ್ಲಂಘನೆ, ಅಂಗವಿಕಲರ ಹಕ್ಕುಗಳ ಉಲ್ಲಂಘನೆ, ರಾಜ್ಯ ಸರ್ಕಾರದ ಇಲಾಖೆಗಳು, ಸ್ಥಳೀಯ ಅಧಿಕಾರಿಗಳು, ಸರ್ಕಾರದ ಪ್ರಾಧಿಕಾರಗಳ ವಿರುದ್ಧ ದೂರು. ಶಿಕ್ಷಣ, ಆರೋಗ್ಯದ ಹಕ್ಕಿನ ಉಲ್ಲಂಘನೆ, ವಿದ್ಯುತ್ ಪ್ರವಹಿಸಿ ಸಾವು, ಪಿಂಚಣಿ ಸಮಸ್ಯೆ, ಪರಿಸರ ಅವನತಿ, ರ್ಯಾಗಿಂಗ್, ಮಾನವ ಅಂಗಾಂಗ ಮಾರಾಟ, ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಬಾಲ್ಯವಿವಾಹ, ಬಾಲಕಾರ್ವಿುಕ ಪದ್ಧತಿಗೆ ಸಂಬಂಧಿಸಿದ ಸಮಸ್ಯೆಗಳು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಕೋಮು ನಿಂದನೆ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡಬಹುದು.

ಈ ದೂರು ಕೈಗೆತ್ತಿಕೊಳ್ಳುವುದಿಲ್ಲ

ಅಸ್ಪಷ್ಟ, ಅನಾಮಧೇಯ, ಸುಳ್ಳು ದೂರುಗಳು ಅಥವಾ ಬೇರೆ ಯಾವುದೇ ವೇದಿಕೆಯ ಮುಂದೆ ಬಾಕಿ ಇರುವ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಸ್ಥಿರಾಸ್ತಿ ವಿವಾದ ಮತ್ತು ಒಪ್ಪಂದಗಳಿಗೆ ಸಂಬಂಧಿತ ಅಥವಾ 1 ವರ್ಷ ಹಳೆಯ, ಸೇವಾ ವಿಷಯ ಮತ್ತು ಕೈಗಾರಿಕಾ ವಿವಾದ, ಕೋರ್ಟ್ ಅಥವಾ ಆಯೋಗ ತೀರ್ವ ನಿಸಿದ ವಿಷಯಗಳು ಮಾನವ ಹಕ್ಕುಗಳ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ.

ನ್ಯಾಯ ಸಿಗುವುದೇ ವಿರಳ

ರಾಜ್ಯದಲ್ಲಿ ಈ ವರ್ಷದ ಜನವರಿ 2ರಿಂದ ನವೆಂಬರ್ 30ರವರೆಗೆ 10,642 ಪ್ರಕರಣಗಳು ದಾಖಲಾಗಿವೆ. 7,585 ಕೇಸ್ ವಿಲೇವಾರಿ ಆಗಿದ್ದು, 3057 ಪ್ರಕರಣಗಳು ಬಾಕಿ ಉಳಿದಿವೆ. ಪೂರ್ಣ ಪ್ರಮಾಣದ ಅಧ್ಯಕ್ಷರು ಇಲ್ಲದೆ ಇರುವುದರಿಂದ ನೊಂದ ಜೀವಗಳಿಗೆ ನ್ಯಾಯ ದೊರೆಯುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net