

ಬೆಂಗಳೂರು: ಚಲನಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ಗೆ ಸರ್ಕಾರ ಕೊನೆಗೂ ಓಕೆ ಎಂದಿದೆ. ಚಿತ್ರೋದ್ಯಮದ ನಿರಂತರ ಒತ್ತಡ ಹೆಚ್ಚಳ, ಕರೊನಾ ಸೋಂಕು ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ ಗ್ರೀನ್ ಸಿಗ್ನಲ್ ನೀಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಶನಿವಾರದಿಂದಲೇ ಶೇ.100 ಸೀಟುಗಳ ಭರ್ತಿಗೆ ಅನುಮತಿ ನೀಡಿದೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಈ ಮಾಹಿತಿ ನೀಡಿದರು. ಯೋಗ ಕೇಂದ್ರ, ಈಜುಗೊಳ, ಜಿಮ್ ಸೆಂಟರ್ಗಳ ಭರ್ತಿಗೂ ಒಪ್ಪಿಗೆ ನೀಡಿದ್ದು, ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ ಎಂದರು.
ಚಿತ್ರಮಂದಿರಗಳ ಒಳಗೆ ಪ್ರೇಕ್ಷಕರು ಯಾವುದೇ ತಿಂಡಿ, ತಿನಿಸು ಪದಾರ್ಥ ಕೊಂಡೊಯ್ಯುವಂತಿಲ್ಲ. ಮಾಸ್ಕ್ ಧರಿಸುವುದು ಕಡ್ಡಾಯ. ಈ ಸಂಬಂಧ ವಿಸ್ತೃತ ಮಾರ್ಗಸೂಚಿಯನ್ನು ಇಂದು ಪ್ರಕಟಿಸಲಾಗುತ್ತೆ. ಸಿನಿಮಾ ಟಾಕೀಸ್, ಜಿಮ್, ಈಜುಕೊಳ ಮಾಲೀಕರು ಈ ನಿಯಮಗಳ ಪಾಲನೆ, ನಿಗಾ ಎರಡನ್ನೂ ಮಾಡಬೇಕು. ಇಲಾಖೆ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ತಪಾಸಣೆ ಮಾಡಲಿದ್ದಾರೆ ಎಂದು ಡಾ.ಸುಧಾಕರ್ ತಿಳಿಸಿದರು.