

ಶಿರಸಿ: ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶದಿಂದ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಗುಡ್ಡ ಕುಸಿತ ವ್ಯಾಪಕವಾಗಿದೆ. ಮಳೆಯ ಸ್ವರೂಪ ಬದಲಾಗಿದ್ದು, ಒಮ್ಮೊಮ್ಮೆ ಅನಾವೃಷ್ಟಿಯಿಂದ ಬರಗಾಲ, ಇನ್ನೊಮ್ಮೆ ಅತಿವೃಷ್ಟಿಯಾಗುತ್ತಿದೆ. ಇದರಿಂದ ಕೃಷಿಕರು ಅಯೋಮಯ ಸ್ಥಿತಿ ತಲುಪಿದ್ದಾರೆ ಎಂದು ಪರಿಸರ ಅರ್ಥಶಾಸ್ತ್ರಜ್ಞ ಡಾ.ಬಿ.ಎಂ.ಕುಮಾರಸ್ವಾಮಿ ವಿಶ್ಲೇಷಿಸಿದರು.
ವೃಕ್ಷ ಲಕ್ಷ ಆಂದೋಲನ ಸಮಿತಿಯಿಂದ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ `ಪರಿಸರ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿ' ಕುರಿತ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಆಶಯ ಭಾಷಣ ಮಾಡಿ ಅವರು ಮಾತನಾಡಿದರು. ಪಶ್ಚಿಮ ಘಟ್ಟಗಳ ಅಧ್ಯಯನ ಕೇಂದ್ರ ಶಿರಸಿಯಲ್ಲಿ ಸ್ಥಾಪನೆಯಾಗಬೇಕು ಎಂದು ಈ ಸಮ್ಮೇಳನ ಮೂಲಕ ಆಗ್ರಹಿಸಲಾಗುತ್ತದೆ ಎಂದರು.
ಮನುಷ್ಯನ ಹಕ್ತಕ್ಷೇಪ ಕಾಣದ ಪುರಾತನ ದಟ್ಟ ಅರಣ್ಯ ಶೇ.18 ರಷ್ಟು ನಾಶವಾಗಿದೆ. ಕಳೆದ 23 ವರ್ಷದಲ್ಲಿ 23 ಲಕ್ಷ ಹೆಕ್ಟೇರ್ ಅರಣ್ಯ ನಾಶವಾಗಿದೆ. ಹುಬ್ಬಳ್ಳಿ -ಅಂಕೋಲಾ ರೈಲಿಗಾಗಿ ಸಾವಿರಾರು ಮರಗಳ ಕಡಿಯಲು ಲೆಕ್ಕ ಹಾಕಲಾಗುತ್ತಿದೆ. ಆಗುಂಬೆಯಲ್ಲಿ ಸುರಂಗ ಕೊರೆಯುವ ಅಭಿವೃದ್ಧಿ ಯೋಜನೆ ಸಿದ್ಧವಾಗಿದೆ. ಅರಣ್ಯ ನಾಶ ಹಾಗೂ ಅದರ ಅನಾಹುತಗಳು ಆಳುವ ಪಕ್ಷಗಳಿಗೆ ಕಾಣದೇ ಇರುವುದು ದುರಂತ.
ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ.ಬಿ.ಎನ್.ಗಂಗಾಧರ್, ಶಿವಾಜಿಯಂತೆ ಪರಿಸರ ಸಂರಕ್ಷಣೆ ಪಡೆ ರಚಿಸಿಕೊಂಡು ಹೋರಾಟ ಮಾಡಿಕೊಂಡು ಬಂದವರು ಅನಂತ ಹೆಗಡೆ ಅಶೀಸರ ಎಂದು ಬಣ್ಣಿಸಿದರು. ಅತಿಥಿಯಾಗಿದ್ದ ಭಾರತೀಯ ಭಾಷಾ ಸಮಿತಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಚಮೂ ಕೃಷ್ಣ ಶಾಸ್ತ್ರಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಜತೆ ಇಚ್ಛಾಶಕ್ತಿಯು ಮುಖ್ಯ ಎಂದರು.
ಸಮಾವೇಶದಲ್ಲಿ ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಪರಿಸರ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ಅವರಿಗೆ ``ವೃಕ್ಷಲಕ್ಷ " ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಅಧಮ್ಯ ಚೇತನ ಸಂಸ್ಥೆಯ ಡಾ.ತೇಜಸ್ವಿ ಅನಂತಕುಮಾರ್ ಭೈರುಂಬೆಯ ಶಾರದಾಂಬಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಉಪಸ್ಥಿತರಿದ್ದರು. ವೃಕ್ಷಾರೋಹಣ ಮತ್ತು ವೃಕ್ಷ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕುಸುಮಾ ಭಟ್ಟ ಪ್ರಾರ್ಥಿಸಿದರು. ಕೇಶವ ಕೊರ್ಸೆ ಸ್ವಾಗತಿಸಿದರು. ಶೈಲಜಾ ಗೋರ್ನಮನೆ ಹಾಗೂ ಮಧುಮತಿ ಬಕ್ಕೆಮನೆ ನಿರೂಪಿಸಿದರು. ವಿಶ್ವೇಶ್ವರ ಭಟ್ಟ ಕೋಟೆಮನೆ ವಂದಿಸಿದರು.
ಸಾನ್ನಿಧ್ಯ ವಹಿಸಿದ್ದ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ವೃಕ್ಷ ಮಿತ್ರ ಗ್ರಂಥ ಲೋಕಾರ್ಪಣೆ ಮಾಡಿ, ಆಶೀರ್ವಚನ ನೀಡಿ, ಇತ್ತೀಚಿನ ದಿನಗಳಲ್ಲಿ ಸೂರ್ಯನ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಸಾವು ನೋವು ಸಂಭವಿಸುತ್ತಿರುವುದನ್ನು ನಾವು ಕೇಳುತ್ತಿದ್ದೇವೆ. ಇವು ದೂರವಾಗಬೇಕಾದರೆ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯವಿದೆ ಎಂದರು.
ಪ್ಲಾಸ್ಟಿಕ್ ಹಾಗೂ ಇತರ ಕಾರಣಗಳಿಂದ ಭೂಮಿಯ ಸತ್ವ ಹಾಳಾಗುತ್ತಿದೆ. ಜಲ, ವಾಯು ಕಲುಷಿತವಾಗುತ್ತಿದೆ. ಪರಿಸರದ ಮೂಲ ಶಕ್ತಿಗಳಾದ ಪಂಚಭೂತಗಳ ಸಂರಕ್ಷೆಯಾದಲ್ಲಿ ಪರಿಸರದ ಸಂರಕ್ಷಣೆಯಾಗಲಿದೆ. ಪರಿಸರದೊಂದಿಗೆ ಜನರ ಶ್ರದ್ಧಾ ಭಾವನೆ ಬೆಳೆಸಬೇಕಿದೆ ಎಂದರು.
ವೃಕ್ಷಮಿತ್ರ ಪುಸ್ತಕದ ಕುರಿತು ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಮಾತನಾಡಿ, ವೃಕ್ಷ ಮಿತ್ರ ಪುಸ್ತಕ ಕೇವಲ ಅಭಿನಂದನ ಗ್ರಂಥವಲ್ಲ. ಅದೊಂದು ಪರಿಸರ ಗ್ರಂಥ. ಅನಂತ ಹೆಗಡೆ ಅಶೀಸರ ರಾಜ್ಯಾದ್ಯಂತ ಸಂಚಾರ ಮಾಡಿ, ಪರಿಸರ ಸಂರಕ್ಷಣೆಯ ಹೋರಾಟದಲ್ಲಿ ತೊಡಗಿಕೊಂಡರು. ರಾಜಕೀಯ ಪ್ರಭಾವಕ್ಕೆ ಒಳಗಾಗದೇ, ಹಲವು ವಿರೋಧ ಕಟ್ಟಿಕೊಂಡು ಹೋರಾಟ ಮಾಡಿದ್ದಾರೆ. ಆದರೆ, ರಾಜಕೀಯ ಕೆಸರನ್ನು ಅಂಟಿಸಿಕೊಳ್ಳದಿರುವುದು ಅವರ ಸಾಧನೆ ಎಂದರು.
ಪಶ್ಚಿಮ ಘಟ್ಟಗಳ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ದೃಷ್ಟಿಯಿಂದ ಮದುವೆ, ಸಭೆ, ಸಮಾರಂಭಗಳಿಗೆ ಪೂರೈಸಲು ಅದಮ್ಯ ಚೇತನ ಸಂಸ್ಥೆಯಿಂದ ಶಿರಸಿಯಲ್ಲಿ ಪ್ಲೇಟ್ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ.ತೇಜಸ್ವಿನಿ ಅನಂತಕುಮಾರ್ಬೆಂಗಳೂರು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ