28 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಕಲಿಕೆ

English-medium-school
Published on

ಕಾರವಾರ: ಸಮಗ್ರ ಜಿಲ್ಲೆಯ 28 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಪ್ರಾರಂಭವಾಗಲಿದೆ. ಜೂನ್ 15 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದೆ.
2024-25 ನೇ ಸಾಲಿನಿಂದ ರಾಜ್ಯದ 2 ಸಾವಿರ ಶಾಲೆಗಳಲ್ಲಿ ದ್ವಿಭಾಷಾ (ಕನ್ನಡ ಮತ್ತು ಆಂಗ್ಲ) ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಪ್ರತಿ ಜಿಲ್ಲೆಗಳಿಂದ ಪ್ರಸ್ತಾವನೆ ತರಿಸಿಕೊಳ್ಳಲಾಗಿತ್ತು. ಅದರಲ್ಲಿ 1419 ಶಾಲೆಗಳಲ್ಲಿ 1 ನೇ ತರಗತಿಯಿಂದ ದ್ವಿಭಾಷಾ ಪದ್ಧತಿಯಲ್ಲಿ ಬೋಧನೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಯ್ಯ ಹೊಸಮಠ ಅವರು ಆದೇಶ ಹೊರಡಿಸಿದ್ದಾರೆ. 75 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರಸ್ತುತ ಇರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಆಂಗ್ಲ ಮಾಧ್ಯಮ ತರಗತಿಗಳನ್ನೂ ನಡೆಸಬೇಕು ಎಂದು ಆದೇಶಿಸಲಾಗಿದೆ. ತರಗತಿಗಳು ಇನ್ನಷ್ಟೇ ಆರಂಭವಾಗಬೇಕಿವೆ.
ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ 19, ಶಿರಸಿ ಶೈಕ್ಷಣಿಕ ಜಿಲ್ಲೆಯ 9 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ತಾಲೂಕಿನ ಒಂದು ಶಾಲೆಗಳಲ್ಲಿ ಈ ಬದ್ಧತಿ ಜಾರಿಯಾಗಿದ್ದು, ಕೆಲವೆಡೆ ಸಾಕಷ್ಟು ಯಶಸ್ವಿಯಾಗಿದೆ. ಅಂಥ ಸರ್ಕಾರಿ ಪ್ರಾಥಮಿಕ ಶಾಲೆಗಳು ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟು ಸಿದ್ಧವಾಗಿವೆ.
ಸರ್ಕಾರ ಈಗ ಇನ್ನಷ್ಟು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸಲು ಸೂಚಿಸಿದೆ. ಆದರೆ, ಆಂಗ್ಲ ಮಾಧ್ಯಮ ಶಿಕ್ಷಕರ ಕೊರತೆ ಇದೆ. ಅವರನ್ನು ನೇಮಕ ಮಾಡಿಕೊಂಡಲ್ಲಿ ಖಾಸಗಿ ಶಾಲೆಗಳ ಡೊನೇಶನ್ ಹಾವಳಿಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.

ಯಾವ್ಯಾವ ಶಾಲೆಯಲ್ಲಿ....?

ಭಟ್ಕಳದ ತೆಂಗಿನಗುಂಡಿ, ಮುಂಡಳ್ಳಿ ನಂ-1, ಕೆರೆಕಟ್ಟೆ, ಹೊನ್ನೆಮಡಿ, ಹಡಿನ, ಸೋನಾರಕೇರಿ ಶಾಸಕರ ಮಾದರಿ ಶಾಲೆ, ಹೆಣ್ಣುಮಕ್ಕಳ ಸರ್ಕಾರಿ ಹಿಡಿಯ ಪ್ರಾಥಮಿಕ ಶಾಲೆ,ಹೊನ್ನಾವರದ ಹೊಸಪಟ್ಟಣ, ಉಪ್ಪೋಣಿ ಉರ್ದು ಶಾಲೆ, ಕುಮಟಾದ ಹುಬ್ಬಣಗೇರಿ ಉರ್ದು ಶಾಲೆ, ಕೂಜಳ್ಳಿ, ಬರ್ಗಿ-1, ಚಿತ್ತರಗಿ, ಮಾಸೂರು, ಅಂಕೋಲಾದ ಖಾರ್ವಿವಾಡ, ಹಾರವಾಡ, ಕಾರವಾರದ ತೋಡೂರು ಪುನರ್ವಸತಿ ಕೇಂದ್ರ, ಮುದಗಾ, ಚಿತ್ತಾಕುಲಾ ಪುನರ್ವಸತಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಮುಂಡಗೋಡಿನ ಇಂದೋರ್ ಕೊಪ್ಪ, ಬಾಚಣಕಿ, ಕೊಡಂಬಿ, ಪಾಳಾದ ಉರ್ದು ಶಾಲೆ, ಸಿದ್ದಾಪುರದ ಹೊಸೂರು ಮಾದರಿ ಶಾಲೆ, ಶಿರಸಿಯ ಮಾರಿಗುಡಿಯ ಮೇಲ್ದರ್ಜೆಗೇರಿಸಿದ ಶಾಲೆ, ರಾಯಪ್ಪ ಹುಲೇಕಲ್, ಯಲ್ಲಾಪುರದ ಉಮ್ಮಚಗಿ, ದೇಶಪಾಂಡೆನಗರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net