

ಕುಮಟಾ: ಇಲ್ಲಿನ ಕೊಪ್ಪಳಕರವಾಡಿಯಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟವಾದ ಘಟನೆ ಶನಿವಾರ ನಡೆದಿದೆ.
ಘಟನೆಯಲ್ಲಿ ಮಧುಕರ ಶೆಟ್ಟಿ ಅವರ ಪತ್ನಿ ಲತಾ ಶೆಟ್ಟಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆ ಆಗಿದೆ. ಮಧುಕರ ಶೆಟ್ಟಿ ಪತ್ನಿ ಲತಾ ಶೆಟ್ಟಿ ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆ ಸಿಲಿಂಡರ್ ಸ್ಪೋಟಗೊಂಡಿದೆ. ಇದರಿಂದ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಪೋಟದ ಶಬ್ದಕ್ಕೆ ಆಸುಪಾಸಿನ ಜನತೆ ಕಂಗಾಲಾಗಿದ್ದಾರೆ. ಸ್ಪೋಟದಿಂದ ಮನೆಯ ಒಳಭಾಗದಲ್ಲಿ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ಪೀಠೋಪಕರಣ, ಟಿ.ವಿ. ಇನ್ನಿತರ ಸಾಮಗ್ರಿ ಸುಟ್ಟಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.