

ಚಿಕ್ಕಬಳ್ಳಾಪುರ: ಆರ್ ಸಿ ಬಿ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಲ್ಲಿ ತಾಲೂಕಿನ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆ.
ತಾಲೂಕಿನ ಕುರುಟಹಳ್ಳಿ ಗ್ರಾಮದ ವಿರಾಟ್ ಕೊಹ್ಲಿ ಅಭಿಮಾನಿ ಹಾಗೂ ದಂತವೈದ್ಯ ವಿದ್ಯಾರ್ಥಿ ಕೆ.ಟಿ. ಶ್ರವಣ್ (20) ಮೃತದೇಹ ಗುರುವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬದವರ ದುಃಖ ಕರುಳು ಹಿಂಡುವಂತಿತ್ತು. ಮೃತದೇಹದ ಎದುರು ಹೆತ್ತವರ ಆಕ್ರಂದನ ಇಡೀ ಗ್ರಾಮವನ್ನೇ ಕಣ್ಣೀರಿನಲ್ಲಿ ತೇಲುವಂತೆ ಮಾಡಿತು.
ಶ್ರವಣ್ ಕುರುಟಹಳ್ಳಿಯ ತಾಪಂ ಮಾಜಿ ಸದಸ್ಯ ಕೃಷ್ಣಪ್ಪ ಅವರ ಮೊಮ್ಮಗ. ತಿಮ್ಮಪ್ಪ ಮತ್ತು ಲಕ್ಷ್ಮೀದೇವಮ್ಮ ಅವರ ಇಬ್ಬರು ಗಂಡುಮಕ್ಕಳ ಪೈಕಿ ಮೊದಲ ಮಗ ಬಿಎಸ್ಸಿ (ಅಗ್ರಿ) ವ್ಯಾಸಂಗ ಮಾಡುತ್ತಿದ್ದರೆ, ಎರಡನೇ ಮಗ ಕೆ.ಟಿ. ಶ್ರವಣ್ ದಂತ ವೈದ್ಯ ಕಲಿಯುತ್ತಿದ್ದ. ಕುಟುಂಬದ ಒಬ್ಬರು ವೈದ್ಯನಾಗುವ ಕನಸು ಕಂಡಿದ್ದರು. ಆದರೆ, ಆ ಕನಸು ಈಗ ನುಚ್ಚುನೂರಾಗಿದ್ದು, ಕುಟುಂಬದ ನೋವು ಹೇಳತೀರದಾಗಿದೆ. ಮೃತ ಶ್ರವಣ್ ಶವ ಕಂಡು ತಾತ, ಅಜ್ಜಿ ಸೇರಿ ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿತ್ತು.
ಗ್ರಾಮದ ಅವರ ನಿವಾಸದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
* ಸರ್ಕಾರದ ವಿರುದ್ಧ ಆಕ್ರೋಶ
ಒಂದೇ ಸಮಯದಲ್ಲಿ ಎರಡೂ ಕಡೆ ಸಂಭ್ರಮಾಚರಣೆ ಮಾಡಿದ್ದು ಸರಿ ಇಲ್ಲ. ನೂಕುನುಗ್ಗಲು ಉಂಟಾಗಿ ಅಮಾಯಕರು ಬಲಿಯಾಗಿದ್ದಾರೆ. ಸರ್ಕಾರ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. 11 ಅಮಾಯಕರು ದುರಂತದಲ್ಲಿ ಮೃತಪಟ್ಟಿದ್ದಾರೆ. ಇದು ದುರದೃಷ್ಟ ಎಂದು ಗ್ರಾಮದ ಮುಖಂಡರಾದ ರಾಧಾಕೃಷ್ಣ ಮತ್ತು ಕೆಪಿಸಿಸಿ ಸದಸ್ಯ ಕೃಷ್ಣಮೂರ್ತಿ ಇತರರು ದು:ಖ ತೋಡಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.