

ತಮಿಳುನಾಡು: ಉಚಿತ ಸೀರೆ ಹಂಚುವ ವೇಳೆ ಉಂಟಾದ ಕಾಲ್ತುಳಿತದಿಂದ ನಾಲ್ವರು ವೃದ್ಧೆಯರು ಸಾವನ್ನಪ್ಪಿದ್ದಾರೆ. 11 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಘಟನೆ ತಿರುಪತ್ತೂರು ಜಿಲ್ಲೆಯ ವನ್ನಿಯಂಬಾಡಿ ಬಳಿ ನಡೆದಿದೆ.
ಪೊಲೀಸರು ಖಚಿತ ಪಡಿಸಿರುವ ಮಾಹಿತಿಯಂತೆ 'ತೈಪೂಸಂ' ಹಬ್ಬದ ಪ್ರಯುಕ್ತ ಅಯ್ಯಪ್ಪನ್ ಎಂಬಾತ ಉಚಿತ ಸೀರೆ ಹಾಗೂ ಪಂಚೆ ವಿತರಣೆ ಮಾಡುತ್ತಿದ್ದ. ಇದಕ್ಕೂ ಮೊದಲು ಟೋಕನ್ ಪಡೆಯಲು ಸಾಕಷ್ಟು ಜನರು ಮುಗಿಬಿದ್ದಿದ್ದಾರೆ. ಈ ವೇಳೆ ಉಂಟಾದ ಕಾಲ್ತುಳಿತದಿಂದ ಅಚಾತುರ್ಯ ಸಂಭವಿಸಿದೆ.
ಘಟನೆಯಲ್ಲಿ ನಾಲ್ವರು ವೃದ್ಧೆಯರು ಸಾವನ್ನಪ್ಪಿದ್ದು ಸಾಕಷ್ಟು ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯ ನಿವಾಸಿಗಳ ಸಹಕಾರದಿಂದ ಪ್ರಾಥಮಿಕ ಚಿಕಿತ್ಸೆ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಹಿಂದು ಸಂಪ್ರದಾಯದಂತೆ ತಮಿಳುನಾಡಿನಲ್ಲಿ ಸುಮಾರು ಒಂದು ತಿಂಗಳ ಕಾಲ ತೈಪೂಸಂ ಹಬ್ಬ ಆಚರಣೆ ಮಾಡಲಾಗುತ್ತದೆ. ಹೀಗಾಗಿ ಜನರಿಗೆ ಅಯ್ಯಪ್ಪನ್ ಎಂಬಾತ ಸೀರೆ ವಿತರಣೆ ಮಾಡಲು ಮುಂದಾಗಿದ್ದ. (ಏಜೆನ್ಸೀಸ್)