

ಬೆಂಗಳೂರು: ಇನ್ನೇನು ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಇರುವಾಗ, ಎಸ್.ಟಿ. ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ಗೆ ಮರುಸೇರ್ಪಡೆ ಆಗುವುದು ಖಚಿತವಾಗಿದೆ. ಈ ಮೂಲಕ ಬಿಜೆಪಿಗೆ ದೊಡ್ಡ ಶಾಕ್ ತಗುಲಿದೆ. ಹೀಗೆ ರಾಜ್ಯ ಬಿಜೆಪಿಗೆ ಆಪರೇಷನ್ ಹಸ್ತದ ಮೊದಲ ಹೊಡೆತ ಇಂದು ಸಂಜೆ ಬೀಳಲಿದೆ ಎಂದೇ ಹೇಳಬಹುದು.
ಇದೀಗ ಎಸ್.ಟಿ. ಸೋಮಶೇಖರ್ ಬೆಂಬಲಿಗರು ಇಂದು ಸಂಜೆ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತ ಎಂಬ ಮಾಹಿತಿ ದಿಗ್ವಿಜಯ ನ್ಯೂಸ್ಗೆ ಲಭಿಸಿದೆ. ಬೆಂಬಲಿಗರ ಹಿಂದೆ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಘರ್ ವಾಪಸ್ ಆಗುವುದು ಬಹುತೇಕ ಕನ್ಫರ್ಮ್ ಎಂದೇ ಹೇಳಲಾಗುತ್ತಿದ್ದು ಈ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಇಂದು ಎಸ್.ಟಿ. ಸೋಮಶೇಖರ್ ಬೆಂಬಲಿಗರು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಜೆ 5 ಗಂಟೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಮಾಜಿ ಕಾರ್ಪೋರೇಟರ್ಗಳಾದ ಆರ್ಯ ಶ್ರೀನಿವಾಸ್, ರಾಜಣ್ಣ ಸೇರಿ ಹಲವರು ಸಂಜೆ ಕಾಂಗ್ರೆಸ್ಗೆ ಸೇರಲಿದ್ದಾರೆ. ಬಿಜೆಪಿಯಿಂದ ಭಾರಿ ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು ಎಸ್.ಟಿ. ಸೋಮಶೇಖರ್ ಬೆಂಬಲಿಗ ಯಶವಂತಪುರ ಮೈನಾರಿಟಿ ಅಧ್ಯಕ್ಷ ಸಜ್ಜದ್ ಬಾಬು ಕೂಡ ಇಂದು ಬಿಜೆಪಿ ತೊರೆಯಲಿದ್ದಾರೆ.
ಮೂರು ದಿನಗಳ ಕಾಲ ತಮ್ಮ ನಾಯಕ ಎಸ್.ಟಿ. ಸೋಮಶೇಖರ್ ಗೆ ಸಮಯ ನೀಡಿದ್ದ ಬೆಂಬಲಿಗರು, ಕಳೆದ ಮೂರು ದಿನಗಳ ಹಿಂದಿನ ಸಭೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದ್ದರು. ತಮ್ಮ ಆಪ್ತರು ಹಾಗೂ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ತಾವೂ ಬಿಜೆಪಿ ಬಿಡಲು ಸೇರ್ಪಡೆಗೆ ಎಸ್.ಟಿ. ಸೋಮಶೇಖರ್ ಪ್ಲಾನ್ ಮಾಡಿದ್ದಾರಾ ಎನ್ನುವ ಪ್ರಶ್ನೆ ಸದ್ಯಕ್ಕೆ ಕಾಡುತ್ತಿದೆ. ಇದು ಬೆಂಬಲಿಗರನ್ನು ಮುಂದೆ ಕಳುಹಿಸಿ ಹಿಂದೆ ಹಿಂಬಾಲಿಸುವ ತಂತ್ರ ಎನ್ನಲಾಗುತ್ತಿದೆ.