ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಬದುಕಿಗೆ ಅಗತ್ಯವಿರುವ ಶಿಕ್ಷಣ ಕಲಿಯುವ ಮೂಲಕ ಜೀವನ ಕಟ್ಟಿಕೊಳ್ಳಬೇಕು. ಕಷ್ಟ ಪರಿಶ್ರಮದ ಜ್ಞಾನಾರ್ಜನೆ ಜತೆಗೆ ಬದುಕಿಗೆ ಸ್ಪಷ್ಟ ಗುರಿ ಇರಲಿ. ಜೀವನ ಎನ್ನುವುದು ಏಳು-ಬೀಳುಗಳ ಮಿಶ್ರಣ. ಪರೀಕ್ಷೆಯಲ್ಲಿ ಬರುವ ಫಲಿತಾಂಶವನ್ನು ಗಟ್ಟಿಮನಸ್ಸಿನಿಂದ ಸ್ವೀಕರಿಸಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ಹೇಳಿದರು.
ಸುಬ್ರಹ್ಮಣ್ಯದ ಎಸ್‌ಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸುಮಾರು 1.30 ಗಂಟೆ ಕಾಲ ಸಂವಾದ ನಡೆದಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಆಯುಕ್ತರು ಉತ್ತರಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸುವ ಕುರಿತು ಆಯುಕ್ತರು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಪ್ರಾಚಾರ್ಯ ಹಾಗೂ ಉಪನ್ಯಾಸಕರನ್ನು ದೇವಳದ ವತಿಯಿಂದ ಅಭಿನಂದಿಸಲಾಯಿತು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಪ್ರಾಚಾರ್ಯ ಸೋಮಶೇಖರ ನಾಯಕ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್., ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಶಿವಸುಬ್ರಹ್ಮಣ್ಯ ಭಟ್, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಇದ್ದರು.
99 ವಿದ್ಯಾರ್ಥಿಗಳಿಗೆ ಸನ್ಮಾನ
ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 99 ವಿದ್ಯಾರ್ಥಿಗಳಿಗೆ ದೇವಳದ ಪ್ರಸಾದ ಹಾಗೂ ಪ್ರಮಾಣಪತ್ರ ವಿತರಿಸುವುದರೊಂದಿಗೆ ಸನ್ಮಾನಿಸಲಾಯಿತು.
ಸರ್ವರಿಗೂ ಗೌರವ ಕೊಡುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಪಾಲಕರಿಗೆ, ಗುರುಗಳಿಗೆ ಸದಾ ವಿಧೇಯರಾಗಿರಬೇಕು. ಮಾನವೀಯ ಮೌಲ್ಯಗಳು ನಮ್ಮಲ್ಲಿ ಬೇರೂರಬೇಕು. ಪರರಿಗೆ ನೆರವಾಗುವ ಶ್ರೇಷ್ಠ ಮನಸ್ಸು ನಮ್ಮದಾಗಬೇಕು.
– ಜುಬಿನ್ ಮೊಹಪಾತ್ರ, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ