ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ತ್ವರಿತ ಸಾಲ ಮಂಜೂರು - ಜಿ.ಪಂ. ಸಿಇಒ ಡಾ.ಆನಂದ್.ಕೆ.

mng-24june-lead bank
Published on



ಮಂಗಳೂರು : ಸರ್ಕಾರದ ವಿವಿಧ ಸಾಲ ಆಧಾರಿತ ಫಲಾನುಭವಿಗಳ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕ್ ಸಾಲವನ್ನು ವಿಳಂಬವಿಲ್ಲದೆ ಮಂಜೂರು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ. ಸೂಚಿಸಿದರು.
ದ.ಕ.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಯಂ ಉದ್ಯೋಗ, ಟ್ಯಾಕ್ಸಿ ಖರೀದಿ ಸೇರಿದಂತೆ ಸರ್ಕಾರದ ಯೋಜನೆಗಳಿಗೆ ವಿವಿಧ ಇಲಾಖೆಗಳು ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಲ ಮಂಜೂರಾತಿಗಾಗಿ ಬ್ಯಾಂಕ್‌ಗಳಿಗೆ ಕಡತ ಕಳುಹಿಸಿ ಕೊಡುತ್ತಿವೆ. ಆದರೆ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರು ಮಾಡದೆ ಅಥವಾ ಯಾವುದೇ
ನಿರ್ಧಾರ ತೆಗೆದುಕೊಳ್ಳದೆ ಫಲಾನುಭವಿಗಳನ್ನು ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಲ್ಲಿ ಓವರ್ ಡ್ರಾಫ್ಟ್ ಖಾತೆ ತೆರೆಯುವಲ್ಲಿ ಬ್ಯಾಂಕುಗಳ ಪ್ರಗತಿ ತೃಪ್ತಿಕರವಾಗಿಲ್ಲ .ಪ್ರತಿ ಬ್ಯಾಂಕ್ ಶಾಖೆಗಳಿಗೆ ವಾರ್ಷಿಕ 10 ಓವರ್ ಡ್ರಾಫ್ಟ್ ಖಾತೆಗಳ ಗುರಿ ನಿಗದಿಪಡಿಸಲಾಗಿದೆ. ಆದರೆ ಈ ಗುರಿ ತಲುಪಲೂ ಬ್ಯಾಂಕುಗಳು ಪ್ರಯತ್ನಪಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಸಾಮಾಜಿಕ ಯೋಜನೆಗಳಿಗೆ ಆದ್ಯತೆಯಲ್ಲಿ ಹಣಕಾಸಿನ ನೆರವು ಒದಗಿಸಬೇಕು. ಕಿಸಾನ್ ಕ್ರೆಡಿಟ್ ಕಾರ್ಡ್, ನಗರ ಮತ್ತು ಗ್ರಾಮೀಣ ಜೀವನೋಪಾಯ ಅಭಿಯಾನದ ಯೋಜನೆಗಳಿಗೆ ಆದ್ಯತೆ ನೀಡಬೇಕು. ಸಾಮಾಜಿಕ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಡಾ. ಆನಂದ್.ಕೆ. ತಿಳಿಸಿದರು.
ಕನ್ನಡಕ್ಕೆ ಆದ್ಯತೆ :
ವಿವಿಧ ಬ್ಯಾಂಕ್‌ಗಳ್ಲಿ ಕನ್ನಡ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರ ರಾಜ್ಯದವರೇ ಅಧಿಕವಾಗಿ ಇದ್ದು, ಗ್ರಾಹಕರಿಗೆ ಕನ್ನಡದಲ್ಲಿ ಮಾಹಿತಿ ಪಡೆಯಲು ಸಮಸ್ಯೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಗ್ರಾಹಕರಿಗೆ ಕನ್ನಡದಲ್ಲೇ ಸಂಪೂರ್ಣ ಮಾಹಿತಿ ನೀಡಲು ಸಿಬ್ಬಂದಿ ಒಬ್ಬರನ್ನು ಪ್ರತಿ ಬ್ಯಾಂಕ್ ಶಾಖೆಯಲ್ಲಿ ನಿಗದಿಪಡಿಸಬೇಕು ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಇದ್ದರೂ ಬ್ಯಾಂಕ್ ಅಧಿಕಾರಿಗಳು ಕನ್ನಡ ಕಲಿಯದೇ ಇರುವುದು ಸರಿಯಲ್ಲ ಎಂದು ಅವರು ಹೇಳಿದರು.
ರಿಸರ್ವ್ ಬ್ಯಾಂಕ್ ಅಧಿಕಾರಿ ವೆಂಕಟರಾಮಯ್ಯ ಮಾತನಾಡಿ, ಕೃಷಿ ಸಾಲ ಪಡೆಯಲು ರೈತರು ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸದಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಿದರು. ರೈತರಿಗೆ ಬ್ಯಾಂಕ್ ಸಾಲ ಮಂಜೂರು ಮಾಡಿದರೆ ಅವರು ಖಾಸಗಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವುದು ತಪ್ಪಲಿದೆ. ರೈತರ ಆತ್ಮಹತ್ಯೆಗೆ ಖಾಸಗಿ ಸಾಲಗಳೇ ಮುಖ್ಯ ಕಾರಣವಾಗಿದೆ ಈ ನಿಟ್ಟಿನಲ್ಲಿ ಕೃಷಿ ಸಾಲಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವಂತೆ ಅವರು ಸೂಚಿಸಿದರು.
ನಬಾರ್ಡ್ ಅಧಿಕಾರಿ ರಮೇಶ್ ಬಾಬು, ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಉಮಾಶಂಕರ ಪ್ರಸಾದ್ , ಲೀಡ್ ಬ್ಯಾಂಕ್ ಅಧಿಕಾರಿ ಕವಿತಾ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net