ಕ್ಲಾಸ್​ಮೇಟ್​ ಫೋನ್​ ನಂಬರ್​ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆನ್​ಲೈನ್​ ಕ್ಲಾಸ್​ ಹೆಸರಲ್ಲಿ ಮಾಡಿದ್ದು ನೀಚ ಕೃತ್ಯ!

Online Class
Published on

ಹೈದರಾಬಾದ್​: ಕರೊನಾ ಸಮಯದಲ್ಲಿ ಆನ್​ಲೈನ್​ ಕ್ಲಾಸ್​ಗಳು ಹೆಚ್ಚಾಗಿ ನಡೆಯುತ್ತಿದ್ದು, ಸದಾ ಮೊಬೈಲ್​ನಲ್ಲಿ ಬಿಜಿಯಾಗಿರುವ ಮಕ್ಕಳ ಮೇಲೆ ಪಾಲಕರು ಎಚ್ಚರಿಕೆ ವಹಿಸದಿದ್ದಾರೆ ಏನಾಗಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಬಂದಿವೆ. ತಾಜಾ ಸೇರ್ಪಡೆ ಎಂಬಂತೆ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್​ಮೇಟ್​ ಒಬ್ಬಳ ಫೋಟೋವನ್ನು ಕೆಟ್ಟದಾಗಿ ಎಡಿಟ್ ಮಾಡಿ ಆಕೆಯನ್ನು ಬೆದರಿಸಿರುವ ಘಟನೆ ಹೈದರಾಬಾದ್​ನಲ್ಲಿ ವರದಿಯಾಗಿದೆ.

ರಾಚಕೊಂಡ ಸೈಬರ್​ ಕ್ರೈಂ ಪೊಲೀಸರ ಪ್ರಕಾರ ಮೇಡ್ಚಲ್​ ಮಲ್ಕಜ್​ಗಿರಿ ಜಿಲ್ಲೆಯ ಮುಡ್ಚಿಂಟಲಪಲ್ಲಿ ಮಂಡಲದ ನಿವಾಸಿಯಾದ 16 ವರ್ಷದ ವಿದ್ಯಾರ್ಥಿ, 10ನೇ ತರಗತಿ ವಿದ್ಯಾರ್ಥಿಗಳ ವಾಟ್ಸ್​ಆ್ಯಪ್​ ಗ್ರೂಪ್​ನ ಸದಸ್ಯನಾಗಿದ್ದಾನೆ. ತನ್ನ ಕ್ಲಾಸ್​ಮೇಟ್​ ಫೋಟೋವನ್ನು ಗ್ರೂಪ್​ನಲ್ಲಿ ನೋಡಿದ್ದಾನೆ. ಬಳಿಕ ಆಕೆಗೆ ಸಂದೇಶವನ್ನು ಸಹ ಕಳುಹಿಸಿದ್ದಾನೆ. ಆದರೆ, ಆಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದಾಗ ಆಕೆಯ ಹೆಸರು ಕೆಡಿಸುವ ಕೆಲಸಕ್ಕೆ ಮುಂದಾಗಿದ್ದಾನೆ.

ಬಳಿಕ ಆಕೆಯ ಪ್ರೊಫೈಲ್​ ಫೋಟೋವನ್ನು ತೆಗೆದುಕೊಂಡು ಫೋಟೋ ಎಡಿಟ್​ ಮಾಡುವ ಆ್ಯಪ್​ಗಳ ಮೂಲಕ ಆಕೆಯ ಫೋಟೋಗಳನ್ನು ಕೆಟ್ಟದಾಗಿ ಎಡಿಟ್​ ಮಾಡಿದ್ದಾನೆ. ಬಳಿಕ ನಕಲಿ ನಂಬರ್​ನಿಂದ ಆಕೆಯ ವಾಟ್ಸ್​ಆ್ಯಪ್​ಗೆ ಫೋಟೋಗಳನ್ನು ಕಳುಹಿಸಿದ್ದಾನೆ. ಬಳಿಕ ಬೆತ್ತಲೆ ವಿಡಿಯೋ ಕಾಲ್​ ಮಾಡುವಂತೆ ಒತ್ತಾಹಿಸಿದ್ದಾನೆ. ಇಲ್ಲದಿದ್ದರೆ ಬೆತ್ತಲೆ ಫೋಟೋಗಳನ್ನು ಗ್ರೂಪ್​ನಲ್ಲಿ ಶೇರ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆದರೆ, ಸಂತ್ರಸ್ತೆ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಸೈಬರ್​ ಕ್ರೈಂ ಪೊಲೀಸರು ಆರೋಪಿಯನ್ನು ಸೆರೆಹಿಡಿದು ಪೊಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಆತ ತನ್ನ ಅಂಕಲ್​ ಮೊಬೈಲ್​ ಫೋನ್​ನಿಂದ ಗೂಗಲ್​ ಡ್ಯಾಶ್​ಬೋರ್ಡ್​ ಸಹಾಯದಿಂದ ತನ್ನ ಮಾಹಿತಿಗಳನೆಲ್ಲ ಅಳಿಸಿ ಹಾಕಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net