ನರ್ಮದಾ ತೀರದಲ್ಲಿರುವ ಶ್ರೀ ಓಂಕಾರ ಮಮಲೇಶ್ವರ ಕ್ಷೇತ್ರ

omkarmamaleshwara
Published on

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’

ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ನಾಲ್ಕನೇಯದಾದ ಶ್ರೀ ಓಂಕಾರ ಮಮಲೇಶ್ವರ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ಬೇರೆಲ್ಲಾ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದೊಂದು ಜ್ಯೋತಿರ್ಲಿಂಗವಿದ್ದರೆ; ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಮಾಂಧಾತದಲ್ಲಿ ಓಂಕಾರ ಮಮಲೇಶ್ವರ ಎಂಬ ಎರಡು ಲಿಂಗಗಳಿವೆ. ಸಪ್ತ ಪುಣ್ಯನದಿಗಳಲ್ಲಿ ಒಂದಾಗಿರುವ ನರ್ಮದಾ ನದಿಯ ದ್ವೀಪದಂತಿರುವ ಪರ್ವತದಲ್ಲಿ ಓಂಕಾರೇಶ್ವರ ಮಂದಿರವಿದೆ. ಈ ಪರ್ವತವು ಓಂ ಆಕಾರದಲ್ಲಿರುವುದರಿಂದ ಇಲ್ಲಿರುವ ಜ್ಯೋತಿರ್ಲಿಂಗವು ಓಂಕಾರೇಶ್ವರ ಎಂದು ಪ್ರಸಿದ್ಧವಾಗಿದೆ. ಮತ್ತೊಂದು ತೀರದಲ್ಲಿ ಮಮಲೇಶ್ವರ ಮಂದಿರವಿದೆ.

ಪುರಾಣಗಳ ಪ್ರಕಾರ ಇಕ್ಷ್ವಾಕು ವಂಶದ ಮಾಂಧಾತನು ಈ ಸ್ಥಳದಲ್ಲಿ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಿದ್ದು, ಆದ್ದರಿಂದ ಈ ಸ್ಥಳಕ್ಕೆ ಮಾಂಧಾತ ಎಂಬ ಹೆಸರು ಬಂದಿದೆ. ದೇವತೆಗಳನ್ನು ಸೋಲಿಸಿ ಮೆರೆಯುತ್ತಿದ್ದ ದಾನವರ ಸಂಹಾರಕ್ಕಾಗಿ ಶಿವನು ಅವತರಿಸಿ ಇಲ್ಲಿ ಜ್ಯೋತಿರ್ಲಿಂಗ ಸ್ವರೂಪದಲ್ಲಿ ನೆಲೆಸಿದ್ದಾನೆ. ಜಗದ್ಗುರು ಶಂಕರಾಚಾರ್ಯರಿಗೆ ಉಪದೇಶವಾದ ಗುಹೆ ಇಲ್ಲಿದ್ದು, ಶಂಕರಾಚಾರ್ಯರ 108 ಅಡಿ ಎತ್ತರದ ಬೃಹತ್ ಮೂರ್ತಿ ಸ್ಥಾಪಿಸಲಾಗಿದೆ. ಭಕ್ತರು ಇಲ್ಲಿ ನರ್ಮದಾ ಪರಿಕ್ರಮ ಮಾಡುತ್ತಾರೆ. ಇಂಧೂರ್ ವಿಮಾನ ನಿಲ್ದಾಣದಿಂದ 85 ಕಿ.ಮೀ.ದೂರದಲ್ಲಿರುವ ಖಾಂಡ್ವಾಕ್ಕೆ ರಸ್ತೆ ಮತ್ತು ರೈಲ್ವೇ ಮಾರ್ಗವಾಗಿ ಹೋಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net