

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’
ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಮೂರನೇಯದಾದ ಉಜ್ಜಯಿನಿ ಮಹಾಕಾಲೇಶ್ವರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.
ಜ್ಯೋತಿರ್ಲಿಂಗಗಳಲ್ಲಿ ದಕ್ಷಿಣಾಭಿಮುಖವಾಗಿರುವ ಏಕೈಕ ಕ್ಷೇತ್ರ ಶಿವಲಿಂಗ ಮಧ್ಯಪ್ರದೇಶದ ಉಜ್ಜಯಿನಿ. ಲಯಕಾರಕನಾದ ಶಿವನಿಗೆ ಇಲ್ಲಿ ಭಸ್ಮಾರತಿ ಪ್ರಸಿದ್ಧವಾದ ಸೇವೆ. ಆವಂತೀಕಾಪುರ ಎಂಬ ಹೆಸರು ಶಿವನು ತ್ರಿಪುರಾಸುರನನ್ನು ಸಂಹರಿಸಿ ಉನ್ನತ ವಿಜಯವನ್ನು ಸಾಧಿಸಿದ್ದಕ್ಕಾಗಿ ಉಜ್ಜಯಿನಿ ಎಂದು ಪ್ರಸಿದ್ಧವಾಗಿದೆ. 84 ಮಹಾದೇವ ಮಂದಿರಗಳು ಹಾಗೂ ಅನೇಕ ಧಾರ್ಮಿಕ ಸ್ಥಳಗಳು ಇಲ್ಲಿವೆ. ಶಕ್ತಿಪೀಠಗಳಾದ ಭದ್ರಕಾಳಿ, ಗಡಕಾಲಿ, ಹರಸಿದ್ಧಿಮಾತಾ, ಮಂಗಳನಾಥ, ಕಾಲಭೈರವ, ಶ್ರೀಕೃಷ್ಣ ಶಿಕ್ಷಣ ಕಲಿತ ಸಾಂಧಿಪನಿ ಆಶ್ರಮ, ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಸದ್ಧರ್ಮ ಸಿಂಹಾಸನ ಮಹಾಪೀಠ, ಜಗತ್ತಿನಲ್ಲೇ ಅಪರೂಪದ ಬೃಹತ್ ಪಾದರಸ ಶಿವಲಿಂಗ, ಗುಹಾಂತರ ದೇವಾಲಯ ಇತ್ಯಾದಿ ಕ್ಷೇತ್ರಗಳಿವೆ.
ದೇಶದ ಸಪ್ತ ಮುಕ್ತಿ ಕ್ಷೇತ್ರಗಳಲ್ಲಿ ಒಂದಾಗಿರುವ ಉಜ್ಜಯಿನಿಯ ಕ್ಷಿಪ್ರಾ ನದಿ ತೀರದಲ್ಲಿ 12 ವರ್ಷಕ್ಕೊಮ್ಮೆ ಕುಂಭಮೇಳ ಜರುಗುತ್ತದೆ. ಖಗೋಳ ಶಾಸಜ್ಞರ ಪ್ರಕಾರ ಉಜ್ಜಯಿನಿಯು ಭೂಮಂಡಲದ ಕೇಂದ್ರಸ್ಥಾನವಾಗಿದ್ದು, ಗ್ರಹಗಳ ಚಲನೆಯ ಅಧ್ಯಯನ, ಸಮಯ ನಿರ್ಣಯಕ್ಕೆ ಇದು ಅತ್ಯಂತ ಸೂಕ್ತಸ್ಥಳವಾಗಿದೆ.
ಇಂದೋರ್‌ನ ವಿಮಾನ ನಿಲ್ದಾಣದಿಂದ 50ಕಿ.ಮೀ. ದೂರದಲ್ಲಿರುವ ಉಜ್ಜಯಿನಿಗೆ ರೈಲು ಮತ್ತು ವಾಹನದ ಸೌಕರ್ಯ ಸಮರ್ಪಕವಾಗಿದೆ.