ಪ್ರಾಚೀನ ಕಾಲದಿಂದಲೂ ಕನ್ನಡಿಗರ ಆರಾಧ್ಯದೈವ ಶ್ರೀಶೈಲ ಮಲ್ಲಿಕಾರ್ಜುನ

srishaila
Published on

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’

ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಎರಡನೇಯದಾದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಶ್ರೀಶೈಲವು ಭೂಕೈಲಾಸ ಎಂದೇ ಹೆಸರಾಗಿರುವ ಜ್ಯೋತಿರ್ಲಿಂಗ ಕ್ಷೇತ್ರ. ಪೌರಾಣಿಕ ಕತೆಯ ಪ್ರಕಾರ ಶಿವನು ಅರ್ಜುನವೃಕ್ಷವಾಗಿ, ಪಾರ್ವತಿಯು ಮಲ್ಲಿಗೆ ಬಳ್ಳಿಯಾಗಿ ನಂತರ ಲಿಂಗರೂಪದಲ್ಲಿ ನೆಲೆಯಾಗಿದ್ದು, ಮಲ್ಲಿಕಾರ್ಜುನ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ‘ಶ್ರೀಶೈಲೇ ಶಿಖರೇ ದೃಷ್ಟೆ, ಪುನರ್ಜನ್ಮ ನ ವಿದ್ಯತೆ’ ಎಂಬ ಮಾತಿನಂತೆ ಶ್ರೀಶೈಲ ಶಿಖರವನ್ನು ದರ್ಶನ ಮಾಡಿದವರಿಗೆ ಪುನರ್ಜನ್ಮವಿಲ್ಲ ಎಂಬ ಮಾತಿದೆ. ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಬ್ರಮರಾಂಭ ಶಕ್ತಿಸ್ಥಳ, ಜಗದ್ಗುರು ಪಂಡಿತಾರಾಧ್ಯ ಪೀಠ ಹೀಗೆ ಈ ಕ್ಷೇತ್ರವು ಧರ್ಮದ ತ್ರಿವೇಣಿ ಸಂಗಮವಾಗಿದೆ. ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮೇಶ್ವರ, ಹೇಮರೆಡ್ಡಿ ಮಲ್ಲಮ್ಮ, ವೇಮನ, ದತ್ತಾವತಾರಿ ಶ್ರೀನರಸಿಂಹ ಸರಸ್ವತಿ ಇತ್ಯಾದಿ ಅನೇಕ ಸಾಧಕರ ಆದ್ಯಾತ್ಮಿಕ ಸಾಧನೆಯ ಸ್ಥಳ ಶ್ರೀಶೈಲ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರಲ್ಲಿ ಬಹುಪಾಲು ಕನ್ನಡಿಗರೆಂಬುವುದು ವಿಶೇಷ.

ಶಿವರಾತ್ರಿ ಸಂದರ್ಭದಲ್ಲಿ ಬೃಹತ್ ಜಾತ್ರೆ, ರಥೋತ್ಸವಗಳು ನಡೆಯುತ್ತವೆ. ಕರ್ನೂಲು ಮೂಲಕ ರಸ್ತೆ ಮಾರ್ಗವಾಗಿ, ಸಮೀಪದ ಮಾರ್ಕಾಪುರದವರೆಗೆ ರೈಲ್ವೇ ಸೌಲಭ್ಯ ಹಾಗೂ ಹೈದ್ರಾಬಾದ್‌ನ ವಿಮಾನ ನಿಲ್ದಾಣದಿಂದ 180 ಕಿ.ಮೀ.ದೂರದಲ್ಲಿ ಶ್ರೀಶೈಲ ಕ್ಷೇತ್ರವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net