

ರಾಮನಗರ: ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಸಾವಿನ ಹಿನ್ನೆಲೆ ಮಠದ ಜವಾಬ್ದಾರಿಯನ್ನ ಬೆಂಗಳೂರಿನ ಗುರುವಣ್ಣ ದೇವರು ಮಠದ ಶ್ರೀಗಳು ವಹಿಸಿಕೊಂಡಿದ್ದಾರೆ.
ಗುರುವಾರ ಕಂಚುಗಲ್ ಬಂಡೇ ಮಠಕ್ಕೆ ಆಗಮಿಸಿದ ಗುರುವಣ್ಣ ದೇವರು ಮಠದ ಶ್ರೀಗಳು, ಬಸವಲಿಂಗ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಭಕ್ತರು ಮತ್ತು ಮಠದ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಕಂಚುಗಲ್ ಬಂಡೇ ಮಠದ ಕಾರ್ಯಗಳು ಎಂದಿನಂತೆ ಮುಂದುವರಿಯಲಿವೆ ಎಂದರು. ಸುಮಾರು 300 ವಿದ್ಯಾರ್ಥಿಗಳು ಶ್ರೀಮಠದಲ್ಲಿ ಆಶ್ರಯ ಪಡೆದಿದ್ದಾರೆ.
ಕಂಚುಗಲ್ ಬಂಡೇ ಮಠದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಎದುರಿಗೆ ಇರುವ ಕೊಠಡಿಯಲ್ಲಿ ಸೋಮವಾರ(ಅ.24) ಬೆಳಗ್ಗೆ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಡೆತ್ನೋಟ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶ್ರೀಗಳ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಶ್ರೀಗಳ ಹಿನ್ನೆಲೆ: ಬಂಡೇಮಠದ ಚನ್ನಮಲ್ಲಯ್ಯ ಮತ್ತು ಪುಟ್ಟಗೌರಮ್ಮ ದಂಪತಿಯ 8ನೇ ಪುತ್ರರಾಗಿ 1977ರ ಏ.18ರಂದು ಜನಿಸಿದ ಬಸವಲಿಂಗ ಶ್ರೀಗಳು, 1997ರ ಜು.9ರಂದು ಮಠದ ಪೀಠಾಧ್ಯಕ್ಷರಾದರು. ಮಠಾಧ್ಯಕ್ಷರಾಗಿದ್ದ ಶ್ರೀ ಶಿವರುದ್ರ ಮಹಾಸ್ವಾಮೀಜಿ ಅವರು ಲಿಂಗೈಕ್ಯರಾಗುವ ಮುನ್ನ ಬಸವಲಿಂಗ ಸ್ವಾಮೀಜಿ ಅವರಿಗೆ ಪಟ್ಟಾಧಿಕಾರ ಮಾಡಲಾಗಿತ್ತು. ಶ್ರೀಗಳ ಪೂರ್ವಾಶ್ರಮದ ಹೆಸರು ಬಸವರಾಜು. 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಬಂಡೇಮಠದಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ಸಿದ್ಧಗಂಗಾ ಮಠದಲ್ಲಿ ಸಂಸ್ಕೃತ ಅಭ್ಯಾಸ ಮಾಡಿದ್ದರು. 2022ರ ಜು.3ರಂದು ಶ್ರೀಮಠದಲ್ಲಿ 25ನೇ ರಜತ ಮಹೋತ್ಸವ ಆಚರಿಸಿದ್ದರು. ಅ.26ರಂದು ಶ್ರೀಮಠದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ಸಚಿವರು, ವಿವಿಧ ಮಠಾಧೀಶರನ್ನು ಆಹ್ವಾನಿಸಿ ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಶ್ರೀಗಳು ದುರಂತ ಅಂತ್ಯಕಂಡದ್ದು ವಿಪರ್ಯಾಸ.
ಮಾಗಡಿ ತಾಲೂಕಿನ ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರೂ ಕಳೆದ ವರ್ಷ ದುರಂತ ಅಂತ್ಯ ಕಂಡಿದ್ದರು. ಅವರ ಮೃತದೇಹ 2021ರ ಡಿ.20ರಂದು ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಂಡೇಮಠದ ಶ್ರೀಗಳ ದೇಹವೂ ಅದೇ ರೀತಿ ಪತ್ತೆ ಆಗಿರುವುದು ಅನುಮಾನಕ್ಕೆ ಎಡೆಮಾಡಿದೆ. ಚಿಲುಮೆ ಮಠದ ಶ್ರೀಗಳು ಲಿಂಗೈಕ್ಯರಾದ ನಂತರ ಬಂಡೇಮಠದ ಶ್ರೀಗಳೇ ಜವಾಬ್ದಾರಿ ಹೊತ್ತಿದ್ದರು. ಕಂಚುಗಲ್ಲು ಬಂಡೇಮಠಕ್ಕೆ 80 ಎಕರೆ ಜಮೀನಿದ್ದು ಶ್ರೀಗಳ ಉಸ್ತುವಾರಿಯಲ್ಲಿ ವ್ಯವಸಾಯ ಮಾಡಿ ಅನ್ನ, ಅಕ್ಷರ ದಾಸೋಹ ಮಾಡುತ್ತಿದ್ದರು.