ಪರೋಪಕಾರದಿಂದ ಸಿಗುವ ಸುಖ ಅದ್ಭುತ : ಚಕ್ರವರ್ತಿ ಸೂಲಿಬೆಲೆ ಅನಿಸಿಕೆ

chakravarthi
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮನುಷ್ಯನಾದವನು ಪರೋಪಕಾರಿಯಾಗಿದ್ದು, ತಾನು ಬೆಳೆಯುವುದರೊಂದಿಗೆ ತನ್ನ ಸುತ್ತಮುತ್ತ ಇರುವವರನ್ನು ಪ್ರೀತಿಸಿ ಬೆಳೆಸಿದಾಗ ಸಿಗುವ ಸುಖ ಅತ್ಯಂತ ಶ್ರೇಷ್ಠವಾಗುವುದು. ಲೌಖಿಕ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ನಿವಾರಿಸಿಕೊಳ್ಳಲು ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಬಂದು ದಾಖಲಾಗಿ ಪ್ರಕೃತಿ ದತ್ತವಾದ ಚಿಕಿತ್ಸೆ ಮತ್ತು ಆಹಾರವನ್ನು ಪಡೆದಾತ ಮನುಷ್ಯನು ಪರಿಪೂರ್ಣ ವ್ಯಕ್ತಿಯಾಗಿ ಬದಲಾಗಲು ಸಾಧ್ಯವಿದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸೌಖ್ಯವನದ ಕ್ಷೇಮ ಹಾಲ್‌ನಲ್ಲಿ ನಡೆದ ಜಗತ್ತಿನ ಸುಖದಲ್ಲಿ ಸ್ವಂತ ಸುಖ ಅಡಗಿದೆ ಎನ್ನುವ ತಾತ್ವಿಕ ವಿಷಯದ ಬಗ್ಗೆ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆಯ ವತಿಯಿಂದ ಚಕ್ರವರ್ತಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಧರ್ಮಸ್ಥಳ ಶಾಂತಿವನ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಶೆಟ್ಟಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ಬಿಂದು, ಡಾ.ಶೋಭಿತ್ ಶೆಟ್ಟಿ ಉಪಸ್ಥಿತರಿದ್ದರು.

ಸೌಖ್ಯವನ ಸಂಸ್ಥೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಮುಖ್ಯವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ವಂದಿಸಿದರು. ಸ್ವಸ್ಥಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net