

ಕಡಬ: ಬಸ್ ನಿಲ್ಲಿಸಿಲ್ಲವೆಂದು ಬಸ್ ಚಾಲಕನಿಗೆ ಕೆಎಸ್ಸಾರ್ಟಿಸಿ ನೌಕರನೊಬ್ಬ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ಶುಕ್ರವಾರ ನಡೆದಿದೆ.
ಸವಣೂರು ಪೆಟ್ರೋಲ್ ಪಂಪ್ ಬಳಿಯಿರುವ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್ಸಾರ್ಟಿಸಿ ನೌಕರ, ಸವಣೂರು ಸಮೀಪದ ಪರಣೆ ನಿವಾಸಿ ನಾರಾಯಣ ಎಂಬುವರು ಬಸ್ ನಿಲ್ದಾಣ ಸಮೀಪ ಬಸ್ ನಿಲ್ಲಿಸಿಲ್ಲವೆಂದು ಆರೋಪಿಸಿ ಚಾಲಕ ಭರತ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಸ್ ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿದಾಗ ಬಸ್‌ಗೆ ಹತ್ತಿದ ನಾರಾಯಣ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ. ಬಸ್ ನಿಲ್ಲಿಸುವಂತೆ ಸೂಚಿಸದೆ ಇರುವ ಕಾರಣ ಬಸ್ ನಿಲ್ಲಿಸಿಲ್ಲ ಎಂದು ಚಾಲಕ ಹೇಳಿಕೊಂಡಿದ್ದಾರೆ. ಬಸ್‌ನಲ್ಲಿದ್ದ ಸಹಪ್ರಯಾಣಿಕರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಹಲ್ಲೆಗೊಳಗಾದ ಚಾಲಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.