

ಬೆಂಗಳೂರು: 'ಈ ಚಿತ್ರವನ್ನು ನಾವು ಪ್ರಭುಲಿಂಗ ಲೀಲೆಯನ್ನಾಧರಿಸಿ ಮಾಡಿದ್ದೇವೆ. 1957ರಲ್ಲಿ ಶಂಕರ್ ಸಿಂಗ್ ಅವರು 'ಪ್ರಭುಲಿಂಗ ಲೀಲೆ' ಚಿತ್ರ ಮಾಡಿದ್ದರು. ಈಗ ಅದರ ನೆಗೆಟಿವ್ ಸಹ ಇಲ್ಲ. ಅದು ದಾಖಲಾಗಬೇಕು ಎಂಬ ಕಾರಣಕ್ಕೆ ಈ ಚಿತ್ರ ಮಾಡಿದ್ದೇವೆ. ಎರಡೂ ಚಿತ್ರಗಳು ಅಲ್ಲಮರ ಕುರಿತದ್ದಾದರೂ, ಎರಡರಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ ...'
ಹಾಗಂತ ಹೇಳಿದ್ದು 'ಶ್ರೀ ಅಲ್ಲಮ ಪ್ರಭು' ಚಿತ್ರದ ನಿರ್ಮಾಪಕ ಮಾಧವಾನಂದ. ಕೆಲವು ವರ್ಷಗಳ ಹಿಂದೆ ಟಿ.ಎಸ್. ನಾಗಾಭರಣರು 'ಅಲ್ಲಮ' ಎಂಬ ಚಿತ್ರ ಮಾಡಿದ್ದರು. ಈಗ 'ಶ್ರೀ ಅಲ್ಲಮ ಪ್ರಭು' ಎಂಬ ಚಿತ್ರ ತಯಾರಾಗಿದೆ. ಎರಡೂ ಚಿತ್ರಗಳಲ್ಲಿ ಏನಾದರೂ ಸಾಮ್ಯತೆಗಳಿವೆಯೇ ಎಂದಾಗ ಮಾಧವಾನಂದ ಉತ್ತರಿಸಿದ್ದು ಹೀಗೆ.
ಅಂದಹಾಗೆ, ಬಿಡುಗಡೆಗೆ ಸಿದ್ಧವಾಗಿರುವ 'ಶ್ರೀ ಅಲ್ಲಮ ಪ್ರಭು' ಚಿತ್ರದ ಟ್ರೇಲರ್ ಮಂಗಳವಾರ ಬಿಡುಗಡೆ ಆಗಿದೆ. ಪ್ರಮೋದ್ ಮುತಾಲಿಕ್ ಮತ್ತು ನಟ ಪ್ರೇಮ್ ಜಂಟಿಯಾಗಿ ಈ ಟ್ರೇಲರ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಪ್ರೇಮ್, 'ನಮ್ಮದು ಶಂಕರಾಚಾರ್ಯ, ಬಸವಣ್ಣ, ಅಲ್ಲಮ, ವಿವೇಕಾನಂದ ಮುಂತಾದ ಸಂತರು ಕಟ್ಟಿದ ನಾಡು. ಹಾಗಾಗಿ, ಬಹಳ ಸದೃಢವಾಗಿದೆ. ಲಕ್ಷ ಕೆ.ಜಿ ಚಿನ್ನ ಲೂಟಿ ಮಾಡಿದರೂ ಗಟ್ಟಿಯಾಗಿದೆ. ಅದಕ್ಕೇ ಇದನ್ನು ಪುಣ್ಯಭೂಮಿ ಎನ್ನುವದು. ಸಂತರ ಜೀವನವನ್ನು ಆಧರಿಸಿ ಈ ಕಾಲದಲ್ಲಿ ಸಿನಿಮಾ ಮಾಡುವುದು ಸುಲಭವಲ್ಲ. ಆ ಕೆಲಸವನ್ನು ಈ ತಂಡ ಮಾಡಿದೆ. ಈ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹಾರೈಸಿದರು.
ಕಮರ್ಷಿಯಲ್ ಚಿತ್ರಗಳ ನಡುವೆಯೂ ಸಂತರ, ಶರಣರ ಕುರಿತಾಗಿ ಚಿತ್ರ ಮಾಡಿರುವುದು ಖುಷಿಯ ವಿಚಾರ ಎಂದೇ ಮಾತು ಶುರು ಮಾಡಿದರು ಪ್ರಮೋದ್ ಮುತಾಲಿಕ್. 'ಈಗಲೂ ಅಲ್ಲಮರ ವಚನ, ವಿಚಾರ ಮತ್ತು ಮಾರ್ಗದರ್ಶನ ಸಮಾಜಕ್ಕೆ ಬೇಕಾಗಿದೆ. ಅದನ್ನು ಸಿನಿಮಾದಂತಹ ಪ್ರಭಾವಿ ಮಾಧ್ಯಮದ ಮೂಲಕ ತಲುಪಿಉತ್ತಿರುವುದು ಖುಷಿಯ ವಿಚಾರ' ಎಂದರು.