

ಬೆಂಗಳೂರು: ‘ಸಂಸ್ಕೃತದಲ್ಲಿ ರೈತನಿಗೆ ಒಟ್ಟು 21 ಹೆಸರುಗಳಿವೆ. ಆ ಪೈಕಿ ‘ಕ್ಷೇತ್ರಪತಿ’ ಸಹ ಒಂದು ...’ ನಿರ್ದೇಶಕ ಶ್ರೀಕಾಂತ್ ಕಟಗಿ ಇಷ್ಟು ಹೇಳುತ್ತಿದ್ದಂತೆಯೇ ಈ ಚಿತ್ರ ಯಾವುದರ ಕುರಿತು ಇರಬಹುದು ಎಂಬ ಸ್ಪಷ್ಟತೆ ಸಿಕ್ಕಿತು. ಅದಕ್ಕೂ ಮುನ್ನ ‘ಕ್ಷೇತ್ರಪತಿ’ ಎಂದರೆ ಏನು? ಈ ಚಿತ್ರ ಯಾವುದರ ಕುರಿತಿರಬಹುದು ಎಂಬ ಪ್ರಶ್ನೆಗಳು ಅಲ್ಲಿದ್ದವರಿಗೆ ಇದ್ದೇ ಇತ್ತು. ನಿರ್ದೇಶಕರ ಮಾತುಗಳು ಉತ್ತರ ನೀಡುತ್ತಾ ಹೋದವು.
ಇದೆಲ್ಲ ಆಗಿದ್ದು ‘ಕ್ಷೇತ್ರಪತಿ’ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ. ಅಂದು ಚಿತ್ರದ ನಾಯಕ ನವೀನ್ ಹುಟ್ಟುಹಬ್ಬ. ಇದೇ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಶುಭ ಕೋರಲಾಯಿತು. ಅದಕ್ಕಾಗಿ ಡಾಲಿ ಧನಂಜಯ್, ಸಿಂಪಲ್ ಸುನಿ ಮುಂತಾದವರನ್ನು ಕರೆಸಲಾಗಿತ್ತು. ಎಲ್ಲರೂ ನವೀನ್ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು.
ನವೀನ್ ಈ ಚಿತ್ರದಲ್ಲಿ ಬಸವ ಎನ್ನುವ ಪಾತ್ರ ಮಾಡಿದ್ದಾರೆ. ‘ಆತ ಒಬ್ಬ ಇಂಜಿನಿಯರಿಂಗ್ ಪದವೀಧರ. ತನ್ನಷ್ಟಕ್ಕೆ ತಾನು ಇರುವಾತ. ಆತನ ಜೀವನದಲ್ಲಿ ನಡೆಯುವ ಒಂದು ಅನಿರೀಕ್ಷಿತ ಘಟನೆಯಿಂದ ಆತ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಈ ಬಸವ ಎಲ್ಲರಲ್ಲೂ ಇದ್ದಾನೆ’ ಎಂದು ಮಾಹಿತಿ ಕೊಟ್ಟರು ನವೀನ್. ಈ ಚಿತ್ರದಲ್ಲಿ ‘ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ‘ತ್ರಾಟಕ’ ಎಂಬ ಚಿತ್ರದಲ್ಲಿ ನಟಿಸಿದ್ದ ರಾಹುಲ್ ಐನಾಪುರ ಇಲ್ಲಿ ವಿಲನ್. ಈಗಾಗಲೇ ಗದಗಿನ ಸುತ್ತ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರವನ್ನು ಪ್ರವೀಣಾ ಕುಲಕರ್ಣಿ ಮುಂತಾದವರು ಜತೆಯಾಗಿ ನಿರ್ವಿುಸುತ್ತಿದ್ದಾರೆ.