

ಮುಂಬೈ: ಸರ್ವಾಂಗೀಣ ನಿರ್ವಹಣೆ ಮುಂದುವರಿಸಿರುವ ದಕ್ಷಿಣ ಆಫ್ರಿಕಾ ತಂಡ ಏಕದಿನ ವಿಶ್ವಕಪ್ನಲ್ಲಿ 4ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ (174 ರನ್, 140 ಎಸೆತ, 15 ಬೌಂಡರಿ, 5 ಸಿಕ್ಸರ್) ಹಾಗೂ ಹೆನ್ರಿಕ್ ಕ್ಲಾಸೆನ್ (90 ರನ್, 49 ಎಸೆತ, 2 ಬೌಂಡರಿ, 8 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತನ್ನ 5ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 149 ರನ್ಗಳಿಂದ ಬೃಹತ್ ಗೆಲುವು ದಾಖಲಿಸಿದೆ. ನಾಯಕ ಶಕೀಬ್ ಅಲ್ ಹಸನ್ ವಾಪಸಾತಿಯ ನಡುವೆ ಬಾಂಗ್ಲಾ 4ನೇ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಜಾರಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಫ್ರಿಕಾ ಡಿಕಾಕ್ -ಕ್ಲಾಸೆನ್ ಹರಿಸಿದ ರನ್ ಮಳೆಯಿಂದಾಗಿ 5 ವಿಕೆಟ್ಗೆ 382 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬಾಂಗ್ಲಾ 46.4 ಓವರ್ಗಳಲ್ಲಿ 233 ರನ್ಗಳಿಗೆ ಸರ್ವತಪತನ ಕಂಡಿತು. ಚೇಸಿಂಗ್ನಲ್ಲಿ 58 ರನ್ಗಳಿಗೆ 5 ವಿಕೆಟ್ ವಿಕೆಟ್ ಕಳೆದುಕೊಂಡ ಬಾಂಗ್ಲಾ 100ರ ಗಡಿ ದಾಟುವುದು ದುಸ್ತರವೆನಿಸಿದಾಗ, ಅನುಭವಿ ಬ್ಯಾಟರ್ ಮಹಮದುಲ್ಲಾ (111 ರನ್, 111 ಎಸೆತ, 11 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟ ನಡೆಸಿ ಸೋಲಿನ ಅಂತರ ತಗ್ಗಿಸಿದರು. ಸತತ 5ನೇ ಪಂದ್ಯದಲ್ಲೂ ಆಫ್ರಿಕಾದ ಎಲ್ಲ ಬೌಲರ್ಗಳು ಕನಿಷ್ಠ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ವಾಂಖೆಡೆಯಲ್ಲಿ ಹರಿಣಗಳ ರನ್ಮಳೆ
ವಾಂಖೆಡೆಯ ಹಿಂದಿನ ಪಂದ್ಯದಲ್ಲಿ ರನ್ಪ್ರವಾಹ ಹರಿಸಿದ್ದ ಹರಿಣಗಳಿಗೆ ಈ ಬಾರಿ ಉತ್ತಮ ಆರಂಭ ಲಭಿಸಲಿಲ್ಲ. ರೀಜಾ ಹೆಂಡ್ರಿಕ್ಸ್ (12), ರಸ್ಸೀ ವಾನ್ ಡೆರ್ ಡಸೆನ್ (1) ಬೇಗನೆ ನಿರ್ಗಮಿಸಿದರು. ನಂತರ ಡಿಕಾಕ್ ಜತೆಯಾದ ಹಂಗಾಮಿ ನಾಯಕ ಏಡೆನ್ ಮಾರ್ಕ್ರಮ್ (60) ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 3ನೇ ವಿಕೆಟ್ಗೆ 137 ಎಸೆತಗಳಲ್ಲಿ 131 ರನ್ ಕಸಿದರು. ಬಳಿಕ 4ನೇ ವಿಕೆಟ್ಗೆ ಜತೆಯಾದ ಡಿಕಾಕ್- ಕ್ಲಾಸೆನ್ ಬಾಂಗ್ಲಾ ಬೌಲರ್ಗಳನ್ನು ದಂಡಿಸಿದರು. ಡಿಕಾಕ್ 101 ಎಸೆತಗಳಲ್ಲಿ ಹಾಲಿ ಆವೃತ್ತಿಯಲ್ಲಿ 3ನೇ ಸಿಡಿಸಿದರು. ಶತಕದ ಬಳಿಕ ರನ್ಗಳಿಕೆಗೆ ಚುರುಕು ಮುಟ್ಟಿಸಿದರು. ಇವರಿಗೆ ಬೆಂಬಲ ನೀಡಿದ ಕ್ಲಾಸೆನ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 34 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ (34*) ತಂಡವನ್ನು 375ರ ಗಡಿ ದಾಟಿಸಿದರು. ಕೊನೇ 10 ಓವರ್ಗಳಲ್ಲಿ ಬಾಂಗ್ಲಾ ಬರೋಬ್ಬರಿ 144 ರನ್ ಬಿಟ್ಟುಕೊಟ್ಟಿತು.
ಏಕದಿನ ವಿಶ್ವಕಪ್ ಪಂದ್ಯವೊಂದರಲ್ಲಿ ಗರಿಷ್ಠ ರನ್ ಸಿಡಿಸಿದ ವಿಕೆಟ್ ಕೀಪರ್-ಬ್ಯಾಟರ್ ಎಂಬ ಆಡಂ ಗಿಲ್ಕ್ರಿಸ್ಟ್ (149) ಅವರ 16 ವರ್ಷದ ಹಿಂದಿನ ದಾಖಲೆಯನ್ನು ಡಿಕಾಕ್ ಮುರಿದರು. 2007ರಲ್ಲಿ ಲಂಕಾ ವಿರುದ್ಧ ಗಿಲ್ಕ್ರಿಸ್ಟ್ ಈ ಸಾಧನೆ ಮಾಡಿದ್ದರು.
ದಕ್ಷಿಣ ಆಫ್ರಿಕಾ(8) ಏಕದಿನ ವಿಶ್ವಕಪ್ನಲ್ಲಿ ಹೆಚ್ಚು ಬಾರಿ 350ಕ್ಕೂ ಅಧಿಕ ರನ್ಗಳಿಸಿದ ಆಸ್ಟ್ರೇಲಿಯಾವನ್ನು (7) ಹಿಂದಿಕ್ಕಿತು. ಭಾರತ (4) ನಂತರದ ಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾ: 5 ವಿಕೆಟ್ಗೆ 382 (ಡಿ ಕಾಕ್ 174, ಹೆಂಡ್ರಿಕ್ಸ್ 12, ಡಸೆನ್ 1, ಮಾರ್ಕ್ರಮ್ 60, ಕ್ಲಾಸೆನ್ 90, ಮಿಲ್ಲರ್ 34*, ಜಾನ್ಸೆನ್ 1*, ಹಸನ್ 67ಕ್ಕೆ2). ಬಾಂಗ್ಲಾದೇಶ: 46.4 ಓವರ್ಗಳಲ್ಲಿ 233 (ಲಿಟನ್ ದಾಸ್ 22, ತಂಜಿದ್ 12, ಶಾಂಟೋ 0, ಶಕೀಬ್ 1, ಮುಶ್ಪೀಕರ್ 8, ಮಹಮುದುಲ್ಲಾ 111, ಮಾಕೋ ಜಾನ್ಸೆನ್ 39ಕ್ಕೆ2, ಕೋಟ್ಜೀ 62ಕ್ಕೆ3, ರಬಾಡ 32ಕ್ಕೆ2).