

ಕೋಲ್ಕತ: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹಾಮಾರಿ ಕರೊನಾ ಸೋಂಕಿನ ಹಾವಳಿಯಿಂದ ತತ್ತರಿಸಿರುವವರಿಗೆ ನೆರವಾಗುವ ಕಾರ್ಯವನ್ನು ಮುಂದುವರಿಸಿದ್ದಾರೆ. ಕೋಲ್ಕತದ ಇಸ್ಕಾನ್ ಕೇಂದ್ರಕ್ಕೆ ನಿತ್ಯವೂ 10 ಸಾವಿರ ಮಂದಿಗೆ ಆಹಾರ ಪೂರೈಕೆ ಮಾಡಲು ನೆರವಾಗುತ್ತಿದ್ದಾರೆ. ಈ ಮುನ್ನ ನಿತ್ಯ 10 ಸಾವಿರ ಮಂದಿಗೆ ಊಟ ನೀಡುತ್ತಿದ್ದ ಇಸ್ಕಾನ್ ಕೋಲ್ಕತ ಕೇಂದ್ರ ಈಗ ಗಂಗೂಲಿ ಬೆಂಬಲದಿಂದ 20 ಸಾವಿರಕ್ಕೂ ಅಧಿಕ ಮಂದಿಗೆ ಆಹಾರ ಒದಗಿಸುತ್ತಿದೆ.
ಮಾಸ್ಕ್, ಗ್ಲೌಸ್ನಂಥ ಸುರಕ್ಷತಾ ಪರಿಕರಗಳನ್ನು ಧರಿಸಿ ಗಂಗೂಲಿ ಶನಿವಾರ ಕೋಲ್ಕತದ ಇಸ್ಕಾನ್ ಕೇಂದ್ರಕ್ಕೆ ಭೇಟಿ ನೀಡಿದ್ದು, ಆಹಾರ ಪೂರೈಕೆ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ‘ಇವು ಕಠಿಣ ದಿನಗಳು. ಸೌರವ್ ಗಂಗೂಲಿ ಫೌಂಡೇಷನ್ನಿಂದ ಸಮಾಜಕ್ಕೆ ಸಣ್ಣ ಕೊಡುಗೆ ನೀಡುತ್ತಿದ್ದೇವೆ. ದೇಶದ ಜನರಿಗೆ ನೆರವಾಗಲು ಪ್ರಯತ್ನಿಸುತ್ತಿರುವ ರಾಜ್ಯ-ಕೇಂದ್ರ ಸರ್ಕಾರ ಮತ್ತು ಎಲ್ಲ ಸಾಮಾಜಿಕ ಕಾರ್ಯಕರ್ತರಿಗೆ ಧನ್ಯವಾದಗಳು’ ಎಂದು ಗಂಗೂಲಿ ಟ್ವೀಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೋಲ್ಕತದ ಇಸ್ಕಾನ್ ಕೇಂದ್ರದ ಉಪಾಧ್ಯಕ್ಷ ಹಾಗೂ ವಕ್ತಾರ ರಾಧರಾಮನ್ ದಾಸ್, ‘ನಾವು ನಿತ್ಯವೂ ನಗರದ 10 ಸಾವಿರ ಮಂದಿಗೆ ಊಟ ಒದಗಿಸುತ್ತಿದ್ದೆವು. ನಮ್ಮ ನೆಚ್ಚಿನ ಸೌರವ್ ದಾ (ಗಂಗೂಲಿ) ಬಂದು ನಮಗೆ ದೇಣಿಗೆಯ ಮೂಲಕ ಬೆಂಬಲ ನೀಡಿದ್ದಾರೆ. ಇದರಿಂದ ನಾವೀಗ ದುಪ್ಪಟ್ಟು ಅಂದರೆ 20 ಸಾವಿರಕ್ಕೂ ಅಧಿಕ ಮಂದಿಗೆ ನಿತ್ಯವೂ ಆಹಾರ ಹಂಚುತ್ತಿದ್ದೇವೆ’ ಎಂದು ಟ್ವೀಟಿಸಿದ್ದಾರೆ. ಇಸ್ಕಾನ್ನಿಂದ ದೇಶದೆಲ್ಲೆಡೆ ನಿತ್ಯವೂ ಸುಮಾರು 4 ಲಕ್ಷ ಮಂದಿಗೆ ಆಹಾರ ವಿತರಿಸಲಾಗುತ್ತದೆ.
ಗಂಗೂಲಿ ಮೊದಲಿಗೆ 50 ಲಕ್ಷ ರೂ. ಮೌಲ್ಯದ ಅಕ್ಕಿಯನ್ನು ಬಡವರಿಗೆ ಹಂಚಿದ್ದರೆ, ಬಳಿಕ ಕೋಲ್ಕತದ ರಾಮಕೃಷ್ಣ ಮಿಷನ್ ಕೇಂದ್ರ ಕಚೇರಿಗೆ ತೆರಳಿ 20 ಸಾವಿರ ಕೆಜಿ ಅಕ್ಕಿ ದೇಣಿಗೆ ನೀಡಿದ್ದರು. ಈ ನಡುವೆ ಅವರ ಸಾರಥ್ಯದ ಬಿಸಿಸಿಐ, ಪಿಎಂ-ಕೇರ್ಸ್ ನಿಧಿಗೆ 51 ಕೋಟಿ ರೂ. ದೇಣಿಗೆ ನೀಡಿದೆ.
ನಾನು ಕೂಡ ದಾದಾ ಅವರ ಅತಿ ದೊಡ್ಡ ಅಭಿಮಾನಿ. ಕ್ರಿಕೆಟ್ ಮೈದಾನದಲ್ಲಿ ಅವರ ಹಲವಾರು ಇನಿಂಗ್ಸ್ ಗಳನ್ನು ನೋಡಿರುವೆ. ಆದರೆ ನಿತ್ಯವೂ 10 ಸಾವಿರ ಮಂದಿಗೆ ಆಹಾರ ಒದಗಿಸುವ ಅವರ ಈ ಇನಿಂಗ್ಸ್ ಅತ್ಯುತ್ತಮವಾಗಿದೆ. ಅವರ ನಾಯಕತ್ವದಲ್ಲಿ ಇಸ್ಕಾನ್ ಕೋಲ್ಕತ ಕೂಡ ಸುದೀರ್ಘ ಟೆಸ್ಟ್ ಪಂದ್ಯವನ್ನು ಆಡುವ ಉತ್ಸಾಹ ಪಡೆದಿದೆ. | ರಾಧರಾಮನ್ ದಾಸ್ ಕೋಲ್ಕತ ಇಸ್ಕಾನ್ ಉಪಾಧ್ಯಕ್ಷ