ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಸೇರಿದಂತೆ ಕ್ರೀಡಾ ದಿಗ್ಗಜರ ಜತೆ ಮೋದಿ ವೀಡಿಯೋ ಕಾನ್ಫರೆನ್ಸ್‌

Gangooly
Published on

ನವದೆಹಲಿ: ಕರೊನಾ ವೈರಸ್‌ ತಡೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಬೆನ್ನಲ್ಲೇ ಈ ವಿಷಯದ ಕುರಿತಂತೆ ಕ್ರೀಡಾ ಲೋಕದ ವಿವಿಧ ದಿಗ್ಗಜರ ಜತೆ ಕೂಡ ವೀಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಮಾತುಕತೆ ನಡೆಸಿದ್ದಾರೆ.

ಕ್ರಿಕೆಟ್‌ ತಾರೆಯರಾದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಪಿ.ವಿ.ಸಿಂಧು, ನೀರಜ್‌ ಛೋಪ್ರಾ, ವಿಶ್ವನಾಥ್‌ ಆನಂದ್‌, ಹಿಮಾ ದಾಸ್‌, ಮೇರಿ ಕೋಮ್‌, ವಿನೇಶ್‌ ಫೋಗಾಟ್‌, ಮನು ಭಾಕೇರ್‌ ಸೇರಿದಂತೆ ಒಟ್ಟು 49 ಕ್ರೀಡಾ ತಾರೆಯರ ಜತೆ ಮಾತುಕತೆ ನಡೆಸಿದರು. ಕ್ರೀಡಾ ಸಚಿವ ಕಿರಣ್ ರಿಜಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಪ್ರತಿಯೊಬ್ಬ ಕ್ರೀಡಾ ಪಟುವಿನಿಂದ ಮಾಹಿತಿ ಪಡೆಯಲು ತಲಾ 12 ನಿಮಿಷ ಅವಕಾಶ ನೀಡಲಾಗಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಜನರು ಯಾರಿಗೂ ತೊಂದರೆ ಕೊಡದೇ ಮನೆಯಲ್ಲಿಯೇ ಶಾಂತಚಿತ್ತರಾಗಿ ಇರುವಂತೆ ತಮ್ಮ ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಜನರಿಗೆ ತಿಳಿಸುವಂತೆ ಪ್ರಧಾನಿ ಇವರಿಗೆ ಸೂಚಿಸಿರುವುದಾಗಿ ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ ಈ ವೀಡಿಯೋ ಕಾನ್ಫರೆನ್ಸ್‌ ಬಗ್ಗೆ ಯಾವುದೇ ಮಾಹಿತಿ ನೀಡಲು ಸೌರವ್‌ ಗಂಗೂಲಿ ನಿರಾಕರಿಸಿದ್ದಾರೆ.

ಐಪಿಎಲ್‌ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ಏಪ್ರಿಲ್‌ 15ರವರೆಗೆ ತಡೆಹಿಡಿಯಲಾಗಿದೆ. ಕರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಕ್ರೀಡಾ ಪಟುಗಳು ಉತ್ಸಾಹದಿಂದ ಮುಂದೆ ಬಂದಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಅವರಿಗೆಲ್ಲಾ ಟ್ವಿಟರ್‌ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net