ಆತಿಥೇಯರ ದಾಳಿಗೆ ಕುಸಿದ ಪ್ರವಾಸಿಗರು; ಸೋಲಿನ ಮೂಲಕ ಅಭಿಯಾನ ಆರಂಭಿಸಿದ ಯುವ ಭಾರತ

Zimbabwe
Published on

ಹರಾರೆ: ಇಲ್ಲಿನ ಹರಾರೆ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ಬಿಗಿ ಬೌಲಿಂಗ್​ ದಾಳಿಗೆ ನಲುಗಿದ ಪ್ರವಾಸಿ ತಂಡವು 13 ರನ್​ಗಳ ಸೋಲೊಪ್ಪಿಕೊಂಡಿದೆ. ಈ ಮೂಲಕ ಯುವ ಭಾರತ ತಂಡವು ಸೋಲಿನ ಮೂಲಕ ಜಿಂಬಾಬ್ವೆ ವಿರುದ್ಧ ತನ್ನ ಅಭಿಯಾನ ಆರಂಭಿಸಿದೆ.

ಟಾಸ್​ ಗೆದ್ದು ಮೊದಲು ಆತಿಥೇಯರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ ಭಾರತ ತಂಡವು ಎದುರಾಳಿಗಳನ್ನು 20 ಓವರ್​ಗಳಲ್ಲಿ 115 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಟೀಮ್​ ಇಂಡಿಯಾ ಪರ ರವಿ ಬಿಷ್ಣೋಯಿ (4-2-13-4), ವಾಷಿಂಗ್ಟನ್​ ಸುಂದರ್ (4-0-11-2), ಆವೇಶ್​ ಖಾನ್​ (4-0-29-1), ಮುಕೇಶ್​ ಕುಮಾರ್​ (3-0-17-1), ಖಲೀಲ್​ ಅಹ್ಮದ್​ (3-0-28-0) ರನ್​ ನೀಡಿ ವಿಕೆಟ್​ ಪಡೆದರು.

ಸುಲಭ ಗುರಿ ಬೆನ್ನತ್ತಿದ್ದ ಟೀಮ್​ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದ ಜಿಂಬಾಬ್ವೆ ಬೌಲರ್​ಗಳು ಪ್ರವಾಸಿ ತಂಡವನ್ನು 19.5 ಓವರ್​ಗಳಲ್ಲಿ 102 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಜಿಂಬಾಬ್ವೆ ಪರ ಟೆಂಡಲ್​ ಚತಾರಾ (3.5-1-16-3), ಸಿಕಂದರ್​ ರಾಜಾ (4-0-25-3), ಲ್ಯೂಕ್​ ಜೋಂಗ್ವೆ (4-0-28-1), ಬ್ಲೆಸ್ಸಿಂಗ್ ಮುಜರ್​ಬನಿ (4-0-17-1), ವೆಲ್ಲಿಂಗ್ಟನ್​ ಮಸಕಡ್ಜಾ (3-0-15-1), ಬ್ರಯಾನ್​ ಬೆನ್ನೆಟ್​ (1-1-0-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಭಾರತದ ಪರ ನಾಯಕ ಶುಭಮನ್​ ಗಿಲ್​ (31 ರನ್, 29 ಎಸೆತ, 5 ಬೌಂಡರಿ), ವಾಷಿಂಗ್ಟನ್​ ಸುಂದರ್​ (27 ರನ್, 34 ಎಸೆತ, 1 ಬೌಂಡರಿ, 1 ಸಿಕ್ಸರ್) ಅತಿಥೇಯರ ಬಿಗಿ ಬೌಲಿಂಗ್​ ದಾಳಿಗೆ ಕೆಲಕಾಲ ದಿಟ್ಟ ಪ್ರತಿರೋಧ ತೋರಿದರಾದರು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಸರಣಿಯ ಎರಡನೇ ಪಂದ್ಯವು ಜುಲೈ 07ರಂದು ಹರಾರೆ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net