ಆಯ್ಕೆ ಸಮಿತಿಯಿಂದ ಕಡೆಗಣನೆ; ವಿಜಯ್​ ಹಜಾರೆ ಟ್ರೋಪಿಯಲ್ಲಿ 6 ವಿಕೆಟ್​ ಉರುಳಿಸಿ ಕಮಾಲ್ ಮಾಡಿದ ಚಹಲ್

Chahal
Published on

ಅಹಮದಾಬಾದ್: ಏಕದಿನ ವಿಶ್ವಕಪ್​ ಫಿನಾಲೆಯಲ್ಲಿ ಸೋಲಿನ ಕಹಿ ಮಾಸುವ ಮುನ್ನವೇ ಟೀಂ ಇಂಡಿಯಾ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ ಆಡಲಿದೆ. ಪ್ರಮುಖ ಆಟಗಾರರು ವಿಶ್ರಾಂತಿಯ ಕಾರಣದಿಂದ ಹೊರಗುಳಿದಿದ್ದು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಮಿ. 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್​ ಯಾದವ್​ ತಂಡವನ್ನು ಮುನ್ನಡೆಸಲಿದ್ದಾರೆ.

ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ ಸಮಯದಲ್ಲಿ ಕೆಲವು ಪ್ರತಿಭಾವಂತ ಆಟಗಾರರನ್ನು ಕಡೆಗಣಿಸಲಾಗಿದ್ದು, ಈ ಪೈಕಿ ಸ್ಪಿನ್ನರ್​ ಯಜುವೇಂದ್ರ ಚಹಲ್​ ಸಹ ಒಬ್ಬರಾಗಿದ್ದಾರೆ. ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿರುವ ಚಹಲ್ ಇದೀಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರಾಖಂಡದ ವಿರುದ್ಧ 6 ವಿಕೆಟ್​ ಪಡೆಯುವ ಮೂಲಕ ಮಿಂಚಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಹಲ್, ಒಂದು ಅಥವಾ ಇನ್ನೊಂದು ರೀತಿಯಲ್ಲಿ ನಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನನ್ನ ತಂಡಕ್ಕೆ ಕೊಡುಗೆ ನೀಡಿದ್ದು ಸಂತೋಷವಾಗಿದೆ. ನಿಮ್ಮೆಲ್ಲರ ಹಾರೈಕೆಗೆ ಅಭಿನಂದನೆಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇತ್ತ ಚಹಲ್​ ತಮ್ಮನ್ನು ತಂಡದಲ್ಲಿ ಸೇರಿಸಿಕೊಳ್ಳದಿರುವ ಬಗ್ಗೆ ಆಯ್ಕೆ ಸಮಿತಿ ವಿರುದ್ಧ ಬಹಿರಂಗವಾಗಿ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು. ಇದೀಗ ದೇಶೀಯ ಕ್ರಿಕೆಟ್​ ಟೂರ್ನಿ ವಿಜಯ್​ ಹಜಾರೆ ಟ್ರೋಫಿಯಲ್ಲಿ ಆರು ವಿಕೆಟ್​ ಪಡೆಯುವ ಮೂಲಕ ಚಹಲ್​ ಮತ್ತೊಮ್ಮೆ ಆಯ್ಕೆಗಾರರ ಗಮನ ಸೆಳೆಯಲು ಯತ್ನಿಸಿದ್ದು, ಈ ಬಾರಿ ಯಶ ಕಾಣಲಿದ್ದಾರ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net