ಹೊಸ ಹೇರ್‌ಸ್ಟೈಲ್‌ನಲ್ಲಿ ಯುವರಾಜ್ ಸಿಂಗ್, ಮನಗೆದ್ದ ರಾಕ್‌ಸ್ಟಾರ್ ಲುಕ್!

yuvraj web
Published on

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಸ್ತೆ ಸುರಕ್ಷತಾ ವಿಶ್ವ ಸರಣಿಯಲ್ಲಿ ಭಾರತ ಲೆಜೆಂಡ್ಸ್ ತಂಡದ ಗೆಲುವಿನಲ್ಲಿ ಮಿಂಚುವ ಮೂಲಕ ತಮ್ಮ ಟ್ರೋಫಿ ಕ್ಯಾಬಿನ್‌ಗೆ ಹೊಸ ಪ್ರಶಸ್ತಿಯನ್ನು ಸೇರ್ಪಡೆಗೊಳಿಸಿರುವ 39 ವರ್ಷದ ಯುವರಾಜ್ ಸಿಂಗ್ ಗುರುವಾರ ಹೊಸ ಕೇಶವಿನ್ಯಾಸದೊಂದಿಗೆ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿಸಿದರು.

ಕಳೆದ ವರ್ಷದ ಲಾಕ್‌ಡೌನ್ ದಿನಗಳಿಂದಲೂ ಕೂದಲನ್ನು ಉದ್ದವಾಗಿ ಬೆಳೆಸಿಕೊಳ್ಳುತ್ತ ಬಂದಿರುವ 2011ರ ಏಕದಿನ ಮತ್ತು 2007ರ ಟಿ20 ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್, ಜನಪ್ರಿಯ ಕೇಶವಿನ್ಯಾಸಕ ಆಲಿಮ್ ಹಕಿಮ್ ಅವರಿಂದ ರಾಕ್‌ಸ್ಟಾರ್ ಮಾದರಿಯ ಹೊಸ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ. ಹೊಸ ಕೇಶ ವಿನ್ಯಾಸದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯುವರಾಜ್, ‘ಹೌದು ಅಥವಾ ಇಲ್ಲ ಅಥವಾ ಬಹುಶಃ’ ಎಂಬ ಅಡಿಬರಹವನ್ನು ಬರೆದಿದ್ದಾರೆ.

ಇದರ ಬೆನ್ನಲ್ಲೇ ಅವರ ಮಾಜಿ ಸಹ-ಆಟಗಾರರು ಮತ್ತು ಅಭಿಮಾನಿಗಳಿಂದ ಮೆಚ್ಚುಗೆ ಸುರಿಮಳೆಯಾಗಿದೆ. ‘ಪಾಜಿ ನೀವೀಗ ಸಂಪೂರ್ಣವಾಗಿ ಬಾದ್‌ಶಾನಂತೆ ಕಾಣಿಸುತ್ತಿದ್ದೀರಿ’ ಎಂದು ಟೀಮ್ ಇಂಡಿಯಾದ ಆರಂಭಿಕ ಶಿಖರ್ ಧವನ್ ಕಾಮೆಂಟ್ ಹಾಕಿದ್ದಾರೆ. ಮಾಜಿ ಕ್ರಿಕೆಟಿಗ ರ್ಇಾನ್ ಪಠಾಣ್, ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ‘ಯುವಿ ಪಾ, ನೀವು ಹೇಗಿದ್ದಿರಿ, ಹಾಗಾಗಿದ್ದೀರಿ’ ಎಂದು ಆಲ್ರೌಂಡರ್ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ಯುವರಾಜ್ ಅವರ ಮಾಜಿ ಗೆಳತಿ ಹಾಗೂ ಬಾಲಿವುಡ್ ನಟಿ ಕಿಮ್ ಶರ್ಮ ಕೂಡ ಕಾಮೆಂಟ್ ಹಾಕಿದ್ದು, ‘ಜಿಪ್‌ಡ್’ ಇಮೋಜಿ ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net