

ನವದೆಹಲಿ: ಕ್ರಿಕೆಟಿಗರಿಗೂ ರಾಜಕೀಯಕ್ಕೂ ಅವಿನಾಭಾವ ನಂಟಿದೆ ಎಂದು ಹೇಳಬಹುದಾಗಿದೆ. ಅನೇಕ ಕ್ರಿಕೆಟಿಗರು ನಿವೃತ್ತಿ ಬಳಿಕ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿದು ಯಶಸ್ಸು ಕೂಡ ಕಂಡಿದ್ದಾರೆ. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದ್ದು, ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.
ಅದಕ್ಕೆ ಪೂರಕವೆಂಬಂತೆ ಕಳೆದ ಕೆಲ ದಿನಗಳ ಹಿಂದೆ ಯುವರಾಜ್ ಸಿಂಗ್ ತಮ್ಮ ತಾಯಿ ಶಬ್ನಮ್ ಅವರೊಟ್ಟಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಯುವರಾಜ್ ಸಿಂಗ್ ರಾಜಕೀಯ ಪ್ರವೇಶಕ್ಕೆ ಪುಷ್ಠಿ ಸಿಕ್ಕಿತ್ತು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವರಾಜ್ ಸಿಂಗ್ ಗುರುದಾಸ್ಪುರದಿಂದ ಸ್ಫರ್ಧಿಸಲು ತಯಾರಿ ನಡೆಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿ ಸಂಸದ ಸನ್ನಿ ಡಿಯೋಲ್ಗೆ ಈ ಬಾರಿ ಟಿಕೆಟ್ ಕೊಡಲು ಬಿಜೆಪಿ ಹಿಂಜರಿಯುತ್ತಿದ್ದು, ಬಿಜೆಪಪಿಯಿಂದ ಕಣಕ್ಕಿಳಿಯಲು ಯುವರಾಜ್ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಯುವರಾಜ್ ಸಿಂಗ್ ಭೇಟಿಯಾಗಿ ನಾಲ್ಕು ದಿನಗಳು ಕಳೆದರೂ ನಿತಿನ್ ಗಡ್ಕರಿ ಅಥವಾ ಬಿಜೆಪಿ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಇದುವರೆಗೆ ನೀಡಿಲ್ಲ. ಆದರೆ, ಯುವರಾಜ್ ಸಿಂಗ್ ತಂದೆ ಯೋಗರಾಜ್ ಮಗನ ರಾಜಕೀಯ ಪ್ರವೇಶಕ್ಕೆ ಉತ್ಸುಕತೆ ತೋರುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಯುವರಾಜ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕ್ರಿಕೆಟಿಗರು ರಾಜಕೀಯಕ್ಕೆ ಎಂಟ್ರಿ ಕೊಡುವುದು ಹೊಸದೇನಲ್ಲ. ಮಾಜಿ ಕ್ರಿಕೆಟಿಗರಾದ ಗೌತಂ ಗಂಭೀರ್, ಮೊಹಮ್ಮದ್ ಅಜರುದ್ದೀನ್, ರವೀಂದ್ರ ಜಡೇಜಾ ಪತ್ನಿ ರಿವಾಬಾ ಸೇರಿದಂತೆ ಅನೇಕರು ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ.