ನೀವಿಬ್ಬರು ಹೊಸ ವಿರಾಟ್​ ಮತ್ತು ರೋಹಿತ್ ಅಂತೆ! ಈ ಮಾತಿಗೆ ಸ್ಟಾರ್​ ಯಶಸ್ವಿ ಜೈಸ್ವಾಲ್​ ಪ್ರತಿಕ್ರಿಯೆ ಹೀಗಿದೆ

ವಿಜಯವಾಣಿ (10)
Published on

ನವದೆಹಲಿ: ಜಿಂಬಾಬ್ವೆ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿಯೂ ಗೆದ್ದು ಬೀಗಿದ ಟೀಮ್ ಇಂಡಿಯಾ, 10ನೇ ವಿಕೆಟ್ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಐದು ಪಂದ್ಯಗಳ ಈ ಸರಣಿಯಲ್ಲಿ 3-1 ರಲ್ಲಿ ಭಾರತ ಮುನ್ನಡೆ ಸಾಧಿಸಿದ್ದು, ಉಳಿದಿರುವ ಒಂದೇ ಒಂದು ಪಂದ್ಯಕ್ಕೂ ಮುನ್ನವೇ ಸರಣಿ ವಶಪಡಿಸಿಕೊಂಡಿದೆ. ನಾಯಕನಾಗಿ ತಂಡವನ್ನು ಮುನ್ನಡೆಸಿದ ಶುಭಮನ್​ ಗಿಲ್​, ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಾರಂಭದಲ್ಲಿ ಮೊದಲ ಹಾಗೂ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮ ಜತೆ ಓಪನಿಂಗ್ ಬಂದಿದ್ದ ಶುಭಮನ್ ಗಿಲ್​, ಮೂರನೇ ಮ್ಯಾಚ್​ನಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗಿದ್ದ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿದ ಗಿಲ್​, ಸ್ಫೋಟಕ ಓಪನಿಂಗ್ ಕೊಟ್ಟಿದ್ದಾರೆ. ಜೈಸ್ವಾಲ್​ ಮತ್ತು ಗಿಲ್ ಆರಂಭಿಕ ಪ್ರದರ್ಶನಕ್ಕೆ ಮನಸೋತ ಕ್ರಿಕೆಟ್ ಪ್ರೇಮಿಗಳು ಇವರಿಬ್ಬರ ಆಟವನ್ನು ನೋಡುತ್ತಿದ್ದರೆ, ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮರನ್ನು ಹೋಲುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಅಭಿಪ್ರಾಯಿಸಿದ್ದಾರೆ.

10 ವಿಕೆಟ್​ಗಳ ಗೆಲುವಿಗೆ ಕಾರಣರಾದ ಜೈಸ್ವಾಲ್ ಮತ್ತು ಶುಭಮನ್ ಗಿಲ್​ ಆಟದ ವೈಖರಿ ಥೇಟ್ ವಿರಾಟ್ ಮತ್ತು ರೋಹಿತ್​ರನ್ನು ನೆನಪಿಸಿದೆ. ಈ ವಿಷಯವನ್ನೇ ಮುಂದಿಟ್ಟು ಕೇಳಲಾದ ಪ್ರಶ್ನೆಗೆ ಜೈಸ್ವಾಲ್ ಕೊಟ್ಟ ಉತ್ತರ ಹೀಗಿದೆ. "ಕೊಹ್ಲಿ ಮತ್ತು ಶರ್ಮಾ ಅವರು ಕೊಟ್ಟ ಕೊಡುಗೆ ಅಪಾರ. ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ನಾನು ಇದ್ದೆ ಎಂಬುದೇ ಒಂದು ಆರ್ಶಿವಾದ. ಆ ಡ್ರೆಸ್ಸಿಂಗ್ ರೂಮ್​ನಲ್ಲಿ ಅವರೊಂದಿಗೆ ಕಳೆದ ಸಮಯ ನಿಜಕ್ಕೂ ಮರೆಯಲಾಗದು. ಸದ್ಯ ನಾನು ಮತ್ತು ಗಿಲ್​ ಮುಂದಿನ ಪಂದ್ಯಗಳ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದೇವೆ" ಎಂದು ಹೇಳಿದರು.

"ಅಲ್ಲಿನ ಪರಿಸ್ಥಿತಿಗೆ ತಕ್ಕವಾಗಿ ಆಡಬೇಕು. ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ಬ್ಯಾಟಿಂಗ್ ಮಾಡುವುದು ಅತೀ ಮುಖ್ಯ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡುವ ಮೂಲಕ ನಾನು ಸಾಕಷ್ಟು ಸಹಾಯ ಪಡೆದಿದ್ದೇನೆ. ಅದರಲ್ಲಿ ಎರಡನೇ ಮಾತಿಲ್ಲ. ಸದ್ಯಕ್ಕೆ ನಾನು ನನ್ನ ಬ್ಯಾಟಿಂಗ್ ಆನಂದಿಸುತ್ತಿದ್ದೇನೆ. ಎಲ್ಲವೂ ದೇವರ ಕೈಯಲ್ಲಿದೆ. ಆತ ಏನೇ ಕೊಟ್ಟರೂ ನಾನು ಅದನ್ನು ಸ್ವೀಕರಿಸುತ್ತೇನೆ" ಎಂದು ಯಶಸ್ವಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net