

ಆಂಧ್ರಪ್ರದೇಶ: ಮಾಲಿವುಡ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯಿಸಿದ 'ದಿ ಗೋಟ್ ಲೈಫ್' ಸಿನಿಮಾ ಕಳೆದ ಮಾರ್ಚ್ 28ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಬಹುನಿರೀಕ್ಷಿತ ಚಿತ್ರಕ್ಕಾಗಿ ಅಂದು ಕಾಯುತ್ತಿದ್ದ ಚಿತ್ರಪ್ರೇಮಿಗಳು, ದೊಡ್ಡ ಪರದೆಯಲ್ಲಿ ಸಿನಿಮಾ ವೀಕ್ಷಿಸಿ, ಪೃಥ್ವಿರಾಜ್ ನಟನೆಯನ್ನು ಮೆಚ್ಚಿ, ಕೊಂಡಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಗಳಿಕೆ ಕಂಡಿದ್ದ ಈ ಚಿತ್ರ, ಒಟಿಟಿ ಪ್ರವೇಶಿಸುವಲ್ಲಿ ಮಾತ್ರ ವಿಫಲವಾಗಿತ್ತು.
ಬ್ಲೆಸ್ಸಿ ನಿರ್ದೇಶನದ 'ಆಡುಜೀವಿತಂ' ಚಿತ್ರವು ಬಿಡುಗೆಡೆಯ ಎರಡು ತಿಂಗಳ ನಂತರ ಒಟಿಟಿಗೆ ಬರಲಿದೆ. ಅಲ್ಲಿಯೇ ಸಿನಿಮಾ ನೋಡುವ ಎಂದು ಅನೇಕರು ನಿರೀಕ್ಷಿಸಿದ್ದರು. ಆದ್ರೆ, ಅಂದುಕೊಂಡಂತೆ ಚಿತ್ರ ಒಟಿಟಿಗೆ ಬರಲಿಲ್ಲ. ಈ ವಿಚಾರದಲ್ಲಿ ಚಿತ್ರತಂಡ ಯಾವುದೇ ಸ್ಪಷ್ಟನೆ ಕೂಡ ನೀಡಿರಲಿಲ್ಲ. ಆಡುಜೀವಿತಂ ಒಟಿಟಿಗೆ ಇನ್ನೂ ಯಾಕೆ ಬಿಡುಗಡೆಗೊಂಡಿಲ್ಲ ಎಂಬ ಪ್ರಶ್ನೆಗೆ ಚಿತ್ರ ತಯಾರಕರಿಂದ ಉತ್ತರ ದೊರಕಿರಲಿಲ್ಲ. ಆದ್ರೆ, ಇದೀಗ ಗೊಂದಲಗಳ ಮಧ್ಯೆ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಇದೇ ಜುಲೈ 19ರಂದು ಸ್ಟ್ರೀಮಿಂಗ್ ಆಗಲಿದೆ.
ಮಲಯಾಳಂ, ತೆಲುಗು, ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಚಿತ್ರಮಂದಿರಗಳಲ್ಲಿ ನೋಡದೆ ಇದ್ದವರು ಇದೀಗ ಮನೆಯಲ್ಲೇ ಕುಳಿತು ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡಬಹುದಾಗಿದೆ. ಚಿತ್ರದಲ್ಲಿ ಪೃಥ್ವಿರಾಜ್, ಜಿಮ್ಮಿ ಜೀನ್-ಲೂಯಿಸ್, ಕೆ.ಆರ್. ಗೋಕುಲ್, ಅಮಲಾ ಪೌಲ್ ಸೇರಿದಂತೆ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆಯಿದೆ.