ನೀನೊಬ್ಬ ದಡ್ಡ... ಅಭ್ಯಾಸದ ವೇಳೆ ಕೊಹ್ಲಿಗೆ ಬುಮ್ರಾ ಆಡಿದ ಮಾತುಗಳು ವೈರಲ್​

Virat Bumrah
Published on

ಕಾನ್ಪುರ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ (Test Match) ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (Virat Kohli) ರನ್​ ಹೊಳೆಯೇ ಹರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಭಿಮಾನಿಗಳ ಹಾಗೂ ಕ್ರೀಡಾ ಪಂಡಿತರ ನಿರೀಕ್ಷೆಯನ್ನು ಹುಸಿಯಾಗಿಸಿದ್ದ ವಿರಾಟ್​ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದ್ದರು. ಏಕದಿನ ವಿಶ್ವಕಪ್​, ಐಪಿಎಲ್​ ಹಾಗೂ ಟಿ-20 ತಂಡದ ಪರ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ವಿರಾಟ್​ ಯಾಕೋ ಟೆಸ್ಟ್​ ಮಾದರಿಯಲ್ಲಿ ರನ್​ ಗಳಿಸಲು ತಿಣುಕಾಡುತ್ತಿದ್ದು, ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯ ಎರಡನೇ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಕಾನ್ಪುರದಲ್ಲಿ ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿರುವ ಟೀಮ್​ ಇಂಡಿಯಾದ ಆಟಗಾರರು ಸರಣಿಯ ಎರಡನೇ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡುತ್ತಿದ್ದಾರೆ. ಆದರೆ, ವಿರಾಟ್​ ಕೊಹ್ಲಿ ಮಾತ್ರ ಯಾಕೋ ತಮ್ಮ ಕಳಪೆ ಫಾರ್ಮ್​ಅನ್ನು ಮುಂದುವರೆಸುವ ಸೂಚನೆ ನೀಡಿದ್ದು, ಇದಕ್ಕೆ ವೇಗಿ ಜಸ್ಪ್ರೀತ್​ ಬುಮ್ರಾ (Jasprit Bumrah) ಎಸೆತವೇ ಕಾರಣವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಇಂಡಿಯನ್ಸ್​ ಎಕ್ಸ್​​ಪ್ರೆಸ್​​ ವರದಿ ಮಾಡಿರುವ ಪ್ರಕಾರ ನೆಟ್ಸ್​ನಲ್ಲಿ ಅಭ್ಯಾಸ ಮಾಡುವಾಗ ವೇಗಿ ಜಸ್ಪ್ರೀತ್​ ಬುಮ್ರಾ ಎಸೆದ 15 ಎಸೆತಗಳನ್ನು ಎದುರಿಸಿದ ವಿರಾಟ್​ 4 ಬಾರಿ ಔಟಾಗಿದ್ದಾರೆ. ಇದನ್ನು ನೋಡಿದ ಬುಮ್ರಾ ಅಷ್ಟು ಎಸೆತಗಳನ್ನು ನಿಮ್ಮ ಮುಂದೆಯೇ ಎಸೆಯಲಾಗಿದೆ. ಕೊನೆಯ ಎಸೆತವನ್ನು ಶಾರ್ಟ್​ ಲೆಗ್​ ಆರಾಮಾಗಿ ಹಿಡಿಯಬಹುದಿತ್ತು. ನೀನೊಬ್ಬ ದಡ್ಡ ಎಂದು ಬುಮ್ರಾ ಕೊಹ್ಲಿಗೆ ಸಲಹೆ ನೀಡಿರುವ ಬಗ್ಗೆ ವರದಿಯಾಗಿದೆ.

ಸೆಪ್ಟೆಂಬರ್​ 27ರಿಂದ ಸರಣಿಯ ಎರಡನೇ ಪಂದ್ಯ ಆರಂಭವಾಗಲಿದ್ದು, ಉಭಯ ತಂಡದ ಆಟಗಾರರು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಮಳೆಯಿಂದಾಗಿ ಸರಣಿಯ ಎರಡನೇ ಪಂದ್ಯ ರದ್ದಾದರೆ ಟ್ರೋಫಿ ಭಾರತದ ಪಾಲಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net