ಟೆಸ್ಟ್​ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದ Yashasvi Jaiswal; ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಈತ

Yashasvi Jaiswal
Published on

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್​ (NewZealand)  ನಡುವಿನ ಟೆಸ್ಟ್​ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಪ್ರವಾಸಿ ತಂಡವು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದು, 294 ರನ್​ಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದಾರೆ. ಮೊದಲ ದಿನದಾಟ ಪ್ರವಾಸಿ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ್ದ ಭಾರತ ತಂಡವು ಎರಡನೇ ದಿನದಾಟದ ಆರಂಭದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ 156 ರನ್​ಗಳಿಗೆ ಆಲೌಟ್ ಆಯಿತು.

156 ರನ್​ಗಳಿಗೆ ಆಲೌಟ್​ ಆಗುವ ಮೂಲಕ ತವರಿನಲ್ಲಿ ಭಾರತ ತಂಡ ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಬೇಕಾಯಿತು. ಇದೆಲ್ಲದರ ನಡುವ ಯುವ ಆರಂಭಿಕ ಯಶಸ್ವಿ ಜೈಸ್ವಾಲ್​ (Yashasvi Jaiswal) ಹೊಸ ದಾಖಲೆಯೊಂದನ್ನು ಬರೆದಿದ್ದು, ತವರು ನೆಲದಲ್ಲಿ ತಮ್ಮ ಸಾಧನೆಯನ್ನು ಮುಂದುವರೆಸಿದ್ದಾರೆ.

ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) 30 ರನ್​ಗಳನ್ನು ಬಾರಿಸಿ ಗ್ಲೆನ್​ ಫಿಲಿಪ್ಸ್​ಗೆ ವಿಕೆಟ್​ ಒಪ್ಪಿಸಿದರು. ಈ ಮೂಲಕ ಒಂದು ಕ್ಯಾಲೆಂಡರ್​ ವರ್ಷದಲ್ಲಿ ಒಂದು ಸಾವಿರ ರನ್​ ಪೂರೈಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ದಿಲೀಪ್ ವೆಂಗ್‌ಸರ್ಕರ್ (Dilip Vengsarkar) ಹೆಸರಿನಲ್ಲಿತ್ತು. ದಿಲೀಪ್​ 23 ವರ್ಷದವರಿದ್ದಾಗ ಈ ಸಾಧನೆ ಮಾಡಿದ್ದು, 22 ವರ್ಷದ ಜೈಸ್ವಾಲ್​ ಇದೀಗ ಹಿರಿಯ ಕ್ರಿಕೆಟಿಗನ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಮುಂದಿನ ದಿನಗಳಲ್ಲಿ ಟೆಸ್ಟ್​ ಸರಣಿಗಳು ನಡೆಯಲಿದ್ದು, ಜೈಸ್ವಾಲ್​ (Yashas Jaiswal) ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದಾರೆ. 2010ರಲ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಒಂದೇ ವರ್ಷದಲ್ಲಿ 1562 ರನ್​ ಗಳಿಸುವ ಮೂಲಕ ಒಂದು ಕ್ಯಾಲೆಂಡರ್​ ವರ್ಷದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net