

ಚೆನ್ನೈ: ಭಾರತ ಮತ್ತು ಬಾಂಗ್ಲಾ ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ತತ್ತರಿಸಿದೆ. ತಂಡದ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಗಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ಯಾಟ್ ಕೆಲಸ ಮಾಡಲಿಲ್ಲ. ಕಷ್ಟದ ಸಮಯದಲ್ಲಿ ಯಶಸ್ವಿ ಜೈಸ್ವಾಲ್ ವಿಕೆಟ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ, ಅದ್ಭುತ ಅರ್ಧಶತಕ ಬಾರಿಸಿದರು.
ಟೀಂ ಇಂಡಿಯಾಗೆ ಗೌತಮ್ ಗಂಭೀರ್ ನೂತನ ಕೋಚ್ ಆದ ನಂತರ ತಂಡವು ಮೊದಲ ಬಾರಿಗೆ ಟೆಸ್ಟ್ ಸರಣಿ ಆಡುತ್ತಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ತವರಿನಲ್ಲಿ ಪಾಕಿಸ್ತಾನವನ್ನು 2-0 ಪಾಯಿಂಟ್ನಿಂದ ಸೋಲಿಸಿ ಭಾರತಕ್ಕೆ ಬಂದಿರುವ ಬಾಂಗ್ಲಾ ತಂಡವು ಮೊದಲ ದಿನವೇ ಭಾರತದ ಬ್ಯಾಟಿಂಗ್ ಮೇಲೆ ಸವಾರಿ ಮಾಡಿತು. ಆದರೆ ಜೈಸ್ವಾಲ್ ಸಂಕಷ್ಟದ ಪರಿಸ್ಥಿತಿಯಲ್ಲೂ ಸ್ಥಿಮಿತ ಕಾಯ್ದುಕೊಂಡು ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಬಾರಿಸಿದರು. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತೋರಿದ ಫಾರ್ಮ್ ಅನ್ನು ಯಶಸ್ವಿ ಮುಂದುವರಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಲು ಬಾಂಗ್ಲಾದೇಶ ನಿರ್ಧರಿಸಿತು. ಹಸನ್ ಮಹಮೂದ್ ತಂಡಕ್ಕೆ ಉತ್ತಮ ಆರಂಭ ನೀಡಿ ಭಾರತದ ಮೂವರು ಬಿಗ್ ಬ್ಯಾಟ್ಸ್ ಮನ್ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅವರು ಮೊದಲು ರೋಹಿತ್ ಶರ್ಮಾ (6), ನಂತರ ಶುಭ್‌ಮನ್ ಗಿಲ್ (0) ಮತ್ತು ವಿರಾಟ್ ಕೊಹ್ಲಿ (0) ಅವರನ್ನು ಔಟ್ ಮಾಡುವ ಮೂಲಕ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಆದರೆ ಯಶಸ್ವಿ ಕಂಗೆಡದೆ ಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾಳ್ಮೆ ಮತ್ತು ಆತ್ಮವಿಶ್ವಾಸದಿಂದ ಬ್ಯಾಟ್ ಮಾಡಿದರು. ಮೊದಲ ಅವಧಿಯ ಅಂತ್ಯದವರೆಗೂ ರಿಷಬ್ ಪಂತ್ ಜೊತೆಗೂಡಿ ಇನ್ನಿಂಗ್ಸ್ ನಿಭಾಯಿಸಿದ ಅವರು ತಂಡಕ್ಕೆ ನಾಲ್ಕನೇ ಹೊಡೆತ ಬೀಳಲು ಅವಕಾಶ ನೀಡಲಿಲ್ಲ. ಆದರೆ, ಎರಡನೇ ಸೆಷನ್ ನಲ್ಲಿ ಪಂತ್ ಔಟಾದರು. ಯಶಸ್ವಿ ಅವರೊಂದಿಗೆ 62 ರನ್‌ಗಳ ಜೊತೆಯಾಟ ನೀಡಿದರು. ಪಂತ್ ನಿರ್ಗಮನದ ನಂತರವೂ ಯಶಸ್ವಿ ದೃಢವಾಗಿ ಉಳಿದು 35ನೇ ಓವರ್ ನ ಐದನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಅರ್ಧಶತಕ ಪೂರೈಸಿದರು.
ಇನ್ನು ಅರ್ಧಶತಕ ಬಾರಿಸಿದ ನಂತರ ಯಶಸ್ವಿ ರಕ್ಷಣಾತ್ಮಕ ಆಟವಾಡಿದರು. ಆದರೆ ಕಡೆಗೆ ನಹಿದ್ ರಾಣಾ ಅವರ ಚೆಂಡನ್ನು ಸ್ಲಿಪ್‌ನಲ್ಲಿ ಶಾದ್ಮನ್ ಇಸ್ಲಾಮ್ ಕ್ಯಾಚ್ ಪಡೆದರು. ಯಶಸ್ವಿ 118 ಎಸೆತಗಳಲ್ಲಿ ಒಂಬತ್ತು ಬೌಂಡರಿ ಬಾರಿಸಿ 56 ರನ್ ಗಳಿಸಿ ಗಮನ ಸೆಳೆದರು.