

ರಾಂಚಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4ನೇ ಬಾರಿಗೆ 50 ರನ್ ಕಲೆಹಾಕಿದ ಯಶಸ್ವಿ ಜೈಸ್ವಾಲ್ ಒಟ್ಟಾರೆ 618 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಸರಣಿಯೊಂದರಲ್ಲಿ 600 ರನ್ ಕಲೆಹಾಕಿದ 5ನೇ ಭಾರತೀಯ ಮತ್ತು 2ನೇ ಭಾರತೀಯ ಆರಂಭಿಕರೆನಿಸಿದ್ದಾರೆ. ಸುನೀಲ್ ಗಾವಸ್ಕರ್ (2 ಬಾರಿ) ಈ ಸಾಧನೆ ಮಾಡಿರುವ ಮೊದಲ ಭಾರತೀಯರಾಗಿದ್ದಾರೆ.
ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ (ತಲಾ 2 ಬಾರಿ) ಮತ್ತು ದಿಲೀಪ್ ಸರ್ದೇಸಾಯಿ ಈ ಸಾಧನೆ ಮಾಡಿರುವ ಇತರ ಭಾರತೀಯರಾಗಿದ್ದಾರೆ. 1970&71ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಸುನೀಲ್ ಗಾವಸ್ಕರ್ 774 ರನ್ ಕಲೆಹಾಕಿರುವುದು ಭಾರತೀಯ ದಾಖಲೆಯಾಗಿದೆ. ಸರಣಿಯಲ್ಲಿ ಇನ್ನೂ 3 ಇನಿಂಗ್ಸ್ ಬಾಕಿ ಉಳಿದಿರುವುದರಿಂದ ಜೈಸ್ವಾಲ್ಗೆ ಈ ದಾಖಲೆಯನ್ನು ಮುರಿಯುವ ಅವಕಾಶವೂ ಎದುರಾಗಿದೆ. 1930ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಆಸೀಸ್ ದಂತಕಥೆ ಡಾನ್ ಬ್ರಾಡ್ಮನ್ 974 ರನ್ ಸಿಡಿಸಿರುವುದು ವಿಶ್ವದಾಖಲೆಯಾಗಿದೆ.
ಸೆಹ್ವಾಗ್ ದಾಖಲೆ ಪತನ
ಕ್ಯಾಲೆಂಡರ್ ವರ್ಷವೊಂದರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವೀರೇಂದ್ರ ಸೆಹ್ವಾಗ್ರ 16 ವರ್ಷ ಹಿಂದಿನ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಮುರಿದರು. ಸೆಹ್ವಾಗ್ 2008ರಲ್ಲಿ 22 ಸಿಕ್ಸರ್ ಸಿಡಿಸಿದ್ದರೆ, ಜೈಸ್ವಾಲ್ ಹಾಲಿ ವರ್ಷದ 2 ತಿಂಗಳಲ್ಲೇ 23 ಸಿಕ್ಸರ್ ಸಿಡಿಸಿದ್ದಾರೆ.