

ರಾಂಚಿ: ಮಗ ಸರ್ಕಾರಿ ನೌಕರ ಆಗಬೇಕೆಂಬ ಆಸೆ ಹೊಂದಿದ್ದ ತಂದೆ ರಾಮ್ಜಿ ಸಿಂಗ್, ಕ್ರಿಕೆಟಿಗನಾಗುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೂ, ತಾಯಿ ಲದುಮಾ ದೇವಿಯ ಪರೋಕ್ಷ ಬೆಂಬಲದೊಂದಿಗೆ ಕ್ರಿಕೆಟಿಗನಾಗುವ ಕನಸು ಕಂಡಿದ್ದರು ಬಿಹಾರದ ರೋಹ್ಟಸ್ ಜಿಲ್ಲೆಯ ಬಡ್ಡಿ ಎಂಬ ಹಳ್ಳಿಯ ಆಕಾಶ್ ದೀಪ್. ಈ ನಡುವೆ, ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದ ತಂದೆ ನಿವೃತ್ತಿ ಹೊಂದಿದ ಬಳಿಕ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಇಡಿದರು. 5 ತಿಂಗಳ ಬಳಿಕ 2015ರ ಫೆಬ್ರವರಿಯಲ್ಲಿ ಅವರು ಮೃತಪಟ್ಟರು. ಬೆನ್ನಲ್ಲೇ ಅಣ್ಣ ಕೂಡ ಅನಾರೋಗ್ಯದಿಂದ ನಿಧನ ಹೊಂದಿದಾಗ ಕುಟುಂಬದ ಹೊಣೆ ಎಲ್ಲ ಆಕಾಶ್ ಹೆಗಲೇರಿತು.
ಆಗ ಆಕಾಶ್ ದೀಪ್ 3 ವರ್ಷಗಳ ಕಾಲ ಕ್ರಿಕೆಟ್ನಿಂದ ಬಹುತೇಕ ದೂರ ಉಳಿದರೂ, ಕ್ರಿಕೆಟಿಗನಾಗುವ ಕನಸು ಇನ್ನೂ ಜೀವಂತ ಉಳಿದಿತ್ತು. ಹೀಗಾಗಿ ಕೋಲ್ಕತಕ್ಕೆ ಹೋಗಿ ಸಂಬಂಧಿಯೊಬ್ಬರ ಜತೆ ನೆಲೆಸುವ ಮೂಲಕ ಕ್ರಿಕೆಟ್ ಆಸೆಗೆ ಮರುಜೀವ ತುಂಬಲು ಯತ್ನಿಸಿದರು. ಅಲ್ಲಿ ಕ್ಲಬ್ ಕ್ರಿಕೆಟ್ ಅವಕಾಶ ಪಡೆದು ಬಳಿಕ ಬಂಗಾಳ ತಂಡ ಸೇರಿದರು. ಐಪಿಎಲ್ನಲ್ಲೂ ಕೆಲ ತಂಡಗಳಿಗೆ ನೆಟ್ ಬೌಲರ್ ಆಗಿದ್ದರು. 2022ರಲ್ಲಿ ಆರ್ಸಿಬಿ ತಂಡ ಸೇರಿದ ಬಳಿಕ ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಲಾರಂಭಿಸಿತು. ಈಗ ಅವರು ತನ್ನ ಹಳ್ಳಿಯಲ್ಲಿ 3 ಮಹಡಿಯ ಮನೆಯನ್ನೂ ನಿರ್ಮಿಸುತ್ತಿದ್ದಾರೆ.
ಇದೇ ವೇಳೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದರೊಂದಿಗೆ ಟೀಮ್ ಇಂಡಿಯಾ ಪರ ಆಡುವ ಅವರ ಕನಸು ಕೂಡ ನನಸಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 4ನೇ ಪಂದ್ಯಕ್ಕೆ ಮುನ್ನ ಕೋಚ್ ರಾಹುಲ್ ದ್ರಾವಿಡ್ರಿಂದ ಆಕಾಶ್ ಟೆಸ್ಟ್ ಕ್ಯಾಪ್ ಪಡೆದ ಕ್ಷಣಕ್ಕೆ ತಾಯಿ ಮತ್ತು ಕುಟುಂಬಸ್ಥರು ಕೂಡ ಸಾಕ್ಷಿಯಾಗಿದ್ದರು.
*ನಾನು ಈ ದಿನವನ್ನು ತಂದೆಗೆ ಅರ್ಪಿಸಲು ಬಯಸುತ್ತೇನೆ. ನಾನು ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆಂಬುದು ಅವರ ಬಯಕೆಯಾಗಿತ್ತು. ನಾನೀಗ ಭಾರತ ಪರ ಆಡುವುದನ್ನು ಅವರು ನೋಡಲಾಗಲಿಲ್ಲ. | ಆಕಾಶ್ ದೀಪ್