

ದುಬೈ: ಕಳೆದ ವರ್ಷದ ಐಪಿಎಲ್ನಲ್ಲಿ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಕೊನೇ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸುವ ಮೂಲಕ ಅಮೋಘ ಗೆಲುವಿನ ರೂವಾರಿಯಾಗಿದ್ದರು. ಈ ಬಾರಿ ಕೆಕೆಆರ್ ತಂಡದಲ್ಲಿ ರಿಟೇನ್ ಆಗಿರುವ ರಿಂಕು ಪಡೆಯುವ ಸಂಭಾವನೆ 55 ಲಕ್ಷ ರೂ. ಆದರೆ ಆ ಪಂದ್ಯದಲ್ಲಿ 5 ಸಿಕ್ಸರ್ ಚಚ್ಚಿಸಿಕೊಂಡಿದ್ದ ವೇಗಿ ಯಶ್ ದಯಾಳ್ರನ್ನು ಗುಜರಾತ್ ಟೈಟಾನ್ಸ್ ತಂಡ ಈ ಬಾರಿ ರಿಲೀಸ್ ಮಾಡಿತ್ತು. ಹರಾಜಿನಲ್ಲಿ ಆರ್ಸಿಬಿ ತಂಡ ಯಶ್ ದಯಾಳ್ಗೆ 5 ಕೋಟಿ ರೂ. ನೀಡಿ ಖರೀದಿಸಿದೆ. ಈ ನಡೆ ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದ್ದು, ಆರ್ಸಿಬಿ ಅಭಿಮಾನಿಗಳು ಇದಕ್ಕೆ ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಬಹುಮಾನಕ್ಕಿಂತ ಅಧಿಕ ಸಂಭಾವನೆ!
ಐಪಿಎಲ್ ಹರಾಜಿನಲ್ಲಿ ಸ್ಟಾರ್ಕ್, ಕಮ್ಮಿನ್ಸ್ ಮೊದಲ ಬಾರಿ 20 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುವ ಆಟಗಾರರೆನಿಸಿದ್ದಾರೆ. ಈ ಮೂಲಕ ಇವರಿಬ್ಬರು ಐಪಿಎಲ್ ಬಹುಮಾನ ಮೊತ್ತಕ್ಕಿಂತಲೂ ಅಧಿಕ ಸಂಭಾವನೆ ಪಡೆಯುವಂತಾಗಿದೆ. ಐಪಿಎಲ್ನಲ್ಲಿ ಚಾಂಪಿಯನ್ ತಂಡವೊಂದು ಪಡೆಯುವ ಬಹುಮಾನ 20 ಕೋಟಿ ರೂ. ಆಗಿದೆ. ಕಮ್ಮಿನ್ಸ್ ಇದಕ್ಕಿಂತ 50 ಲಕ್ಷ ರೂ. ಮತ್ತು ಸ್ಟಾರ್ಕ್ 4.75 ಕೋಟಿ ರೂ. ಅಧಿಕ ಸಂಭಾವನೆ ಪಡೆಯಲಿದ್ದಾರೆ.